Father-killed children: ಪತ್ನಿ ಮೇಲೆ ಶಂಕಿಸಿ ಹೆತ್ತ ಮಕ್ಕಳನ್ನೇ ಕೊಂದ ಪಾಪಿ ತಂದೆ..!
ಪತ್ನಿ ಶೀಲ ಶಂಕಿಸಿ ಹೆತ್ತ ತಂದೆಯೇ ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ.
ಶರಣಪ್ಪ ಎಂಬಾತ ಈ ಕೃತ್ಯ ಎಸಗಿದ್ದು, ತನ್ನ ಮೂವರ ಮಕ್ಕಳ ಪೈಕಿ ಇಬ್ಬರನ್ನು ಕೊಂದಿದ್ದಾನೆ. ಕೊಲೆಯಾದ ಮಕ್ಕಳನ್ನು ಭಾರ್ಗವ್ (5) ಹಾಗೂ ಸಾನ್ವಿ(3) ಎಂದು ಗುರುತಿಸಲಾಗಿದೆ. ಹಿರಿಯ ಮಗ ಹೇಮಂತ್ (8) ಕೊಲೆಗೂ ಶರಣಪ್ಪ ಯತ್ನಿಸಿದ್ದು, ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಳೆದ ಕೆಲವು ದಿನಗಳಿಂದ ದಂಪತಿಯ ನಡುವೆ ಹೊಂದಾಣಿಕೆ ಇರಲಿಲ್ಲ. ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಶರಣಪ್ಪ (30) ಎಂಬಾತ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರತಿದಿನ ಇಬ್ಬರ ಮಧ್ಯೆ ಜಗಳ ತಾರಕಕ್ಕೇರದೆ. ಈ ಜಗಳದಿಂದ ಮನನೊಂದ ಪತ್ನಿ ಮಕ್ಕಳ ಸಮೇತ ತವರು ಮನೆ ಸೇರಿದ್ದಳು. ಕೆಲವು ದಿನಗಳ ಹಿಂದಷ್ಟೇ ತನ್ನ ಮನೆಗೆ ವಾಪಾಸ್ಕರೆದುಕೊಂಡು ಬದಿದ್ದ. ಆಗ ಮತ್ತೆ ಶರಣಪ್ಪನಿಗೆ ತನ್ನ ಪತ್ನಿಯ ಮೇಲೆ ಶಂಕೆ ಬಂದು, ಈ ಕೃತ್ಯಕ್ಕೆ ಮುಂದಾಗಿದ್ದಾನೆ. ನಿನ್ನೆಯಷ್ಟೇ ಅವನ ಮಗಳು ಸಾನ್ವಿಯನ್ನು (5) ಕರೆದುಕೊಂಡು ಬಂದಿದ್ದ.
ಇಂದು ಬೆಳಗ್ಗೆ ಪತ್ನಿ ಬಹಿರ್ದೆಸೆಗೆ ಹೋಗಿದ್ದಾಗ, ಮಲಗಿದ್ದ ಮಕ್ಕಳ ಮೇಲೆ ಶರಣಪ್ಪ ಕೊಡಲಿಯಿಂದ ದಾಳಿ ಮಾಡಿದ್ದಾನೆ.ಈ ದಾಳಿಯಿಂದಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿವೆ. ಮೂರನೇ ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಶರಣಪ್ಪನು ಕೋಪದಲ್ಲಿ ಮಕ್ಕಳನ್ನು ಕೊಂದ ನಂತರ ಕೊಡಲಿ ಸಮೇತ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸ್ಥಳಕ್ಕೆ ಡಿವೈಎಸ್‌ಪಿ ಸುರೇಶ್ ನಾಯಕ್ ಮತ್ತು ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.