Hindu Mahasabha; ಡಿಜೆ ಇಲ್ಲದೆ ಇದ್ರು ಹಿಂದೂ ಮಹಾಸಭಾಗಣಪನಿಗೆ ಅದ್ಧೂರಿ ವಿದಾಯ
ಎಲ್ಲೆಲ್ಲೂ ಕೇಸರಿ ಶಾಲು ಧರಿಸಿದ ಭಕ್ತರು, ಡಿಜೆಯಿಲ್ಲದಿದ್ದರೂ ಆರ್ಕೇಸ್ಟ್ರಾ ಹಾಡಿಗೆ ಹೆಜ್ಜೆ ಹಾಕಿದ ಯುವಜನರು, ಗಣಪ ಮೂರ್ತಿ ಹೊರಗೆ ಬರುತ್ತಿದ್ದಂತೆ ವರುಣನ ಸಿಂಚನ. ಹೀಗೆ ದಾವಣಗೆರೆಯ ಹಿಂದೂ ಮಹಾಸಭಾಗಣಪತಿಯ ಶೋಭಾಯಾತ್ರೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಾಗಿತು.
ಹೈಸ್ಕೂಲ್ ಮೈದಾನದಿಂದ ಮಧ್ಯಾಹ್ನದ ಹೊತ್ತಿಗೆ ಹೊರಟ ಮೆರವಣಿಗೆ ಎವಿಕೆ ರಸ್ತೆ, ಚೇತನ ಹೊಟೇಲ್ ಬಳಿಯ ರಸ್ತೆ, ಅಂಬೇಡ್ಕರ್ ಸರ್ಕಲ್, ಜಯದೇವ ವೃತ್ತ, ಲಾಯರ್ ರಸ್ತೆ, ಪಿ. ಬಿ. ರಸ್ತೆ, ಅರುಣಾ ಚಿತ್ರಮಂದಿರದವರೆಗೆ ತಲುಪಿ ಆ ನಂತರ ಬಾತಿ ಕೆರೆಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಡೋಲು, ಕಂಸಾಳೆ, ನಾಸಿಕ್ ಡೋಲು, ವಾಹನಗಳಲ್ಲಿ ಆರ್ಕೆಸ್ಟ್ರಾ ಸಿಸ್ಟಂ ಅಳವಡಿಸಿ ಹಾಡುಗಳನ್ನು ಹಾಕಿ ಯುವಕ ಮತ್ತು ಯುವತಿಯರು ಕುಣಿದು ಕುಪ್ಪಳಿಸಿದರು. ಪುಟಾಣಿ ಮಕ್ಕಳು, ಹಿರಿಯರು, ವಿದ್ಯಾರ್ಥಿಗಳು ಬಿಂದಾಸ್ ಆಗಿಯೇ ಸ್ಟೆಪ್ ಹಾಕಿದರು.
ಡಿಜೆ ಸಂಪೂರ್ಣ ನಿಷೇಧ
ಡಿಜೆ ಸಿಸ್ಟಂ ಅಳವಡಿಕೆಗೆ ಮೊದಲಿನಿಂದಲೂ ಒತ್ತಾಯ ಕೇಳಿ ಬಂದಿತ್ತು. ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರು ಯಾವುದೇ ಕಾರಣಕ್ಕೂ ಡಿಜೆ ಸಿಸ್ಟಂ ಅಳವಡಿಕೆಗೆ ಅನುಮತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.ಹಾಗಾಗಿ, ಡಿಜೆ ಬಳಸಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ಜನಸ್ತೋಮ ಕಡಿಮೆ ಇದ್ದದ್ದು ಕಂಡು ಬಂತು. ಗಣೇಶ ಮೂರ್ತಿ ಇದ್ದ ಟ್ರ್ಯಾಕ್ಟರ್ ಮುಂದೆ ಕುಣಿದು ಕುಪ್ಪಳಿಸುತ್ತಿದ್ದ ಯುವಕರ ಗುಂಪು ನಮಗೆ ಡಿಜೆ ಬೇಕೇ ಬೇಕು ಎಂದು ಘೋಷಣೆ ಹಾಕಿದರು. ಡಿಜೆ, ಡಿಜೆ, ಡಿಜೆ ಎಂಬ ಕೂಗು ಆಗಾಗ್ಗೆ ಮಾರ್ಧನಿಸುತ್ತಲೇ ಇತ್ತು.
ಟ್ರ್ಯಾಕ್ಟರ್ ಚಲಾಯಿಸಿದ ಎಸ್ಪಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಗಮನ ಸೆಳೆದರು. ಶಾಂತಿಯುತವಾಗಿ ಮೆರವಣಿಗೆ ನಡೆಯಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶ್ರದ್ದಾ ಭಕ್ತಿಯಿಂದ ಮೆರವಣಿಗೆ ಸಾಗಲಿ ಎಂದು ಕಿವಿಮಾತು ಹೇಳಿದರು.