Dehli: 4 ವರ್ಷದ ಬಾಲೆಗೆ ರಾಷ್ಟ್ರಪತಿಗಳಿಂದ ಗೌರವ
2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೊಡ್ಡ ದೊಡ್ಡ ನಟ-ನಟಿಯರು, ಗಣ್ಯರು ಆಗಮಿಸಿದ್ದರೂ, 4 ವರ್ಷದ ತ್ರಿಶಾ ಥೋಸರ್ ಸಮಾರಂಭದ ಕೇಂದ್ರಬಿಂದುವಾಗಿದ್ದಳು. ಮರಾಠಿ ಭಾಷೆಯ ಸಿನಿಮಾ ‘ನಾಲ್- 2’ ಸಿನಿಮಾದಲ್ಲಿ ಅತ್ಯದ್ಭುತವಾಗಿ ಅಭಿನಯಿಸಿದ್ದಕ್ಕಾಗಿ ಅತ್ಯುತ್ತಮ ಬಾಲ ಕಲಾವಿದೆ ಎಂದು ಬಾಲಕಿ ತ್ರಿಶಾ ಥೋಸರ್ ಗೆ 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ.
ಪ್ರಶಸ್ತಿಯನ್ನು ಸ್ವೀಕರಿಸಲು ಆಗಮಿಸುತ್ತಿರುವ ತ್ರಿಶಾ ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ. ತ್ರಿಶಾ ಥೋಸರ್ ಗೋಲ್ಡನ್ ಕಲರ್ ಸೀರೆ ಧರಿಸಿ, ಹಣೆಯ ಮೇಲೆ ಚಿಕ್ಕದಾದ ಬಿಂದಿಯನ್ನಿಟ್ಟುಕೊಂಡು ತನ್ನ ಕೂದಲುಗಳನ್ನು ಮುತ್ತುಗಳಿಂದ ಅಲಂಕರಿಸಿದ್ದಳು. ಇಡೀ ಸಮಾರಂಭದ ಆಕರ್ಷಣೆಯಾಗಿದ್ದಳು.
4ನೇ ವಯಸ್ಸಿಗೆ ತ್ರಿಶಾ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದು, ಕೇವಲ ‘ನಾಲ್ 2’ ಸಿನಿಮಾ ಮಾತ್ರವಲ್ಲದೆ ಪುನ್ಹಾ ಶಿವಾಜಿ ರಾಜೇ ಭೋಸಲೆ, ಮಾನ್ವತ್ ಮರ್ಡರ್ಸ್ ಹಾಗೂ ಪೆಟ್ ಪುರಾಣ ಸೇರಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸ್ವತಃ ಕಮಲ್ ಹಾಸನ್ ಅವರು ತ್ರಿಶಾ ಥೋಸರ್ ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ, ‘ಕಂದಾ, ನಾನು ಕಮಲ್ ಹಾಸನ್. ನನ್ನ ರೆಕಾರ್ಡ್ ಅನ್ನು ಬ್ರೇಕ್ ಮಾಡಿದೆ’ ಎಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.