Wall collapse accident: ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆಯ ಗೋಡೆ ಕುಸಿದು ಕಾರ್ಮಿಕ ಸಾವು, ಮತ್ತೋರ್ವನಿಗೆ ಗಂಭೀರ ಗಾಯ
ನೂತನವಾಗಿ ನಿರ್ಮಿಸಲಾಗಿದ್ದ ಕಾರ್ಮಿಕ ಇಲಾಖೆಯ ಸಮುಚ್ಛಯ ಕಟ್ಟಡದ ಗೋಡೆ ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಆತನ ಸಹೋದರನ ಕೈಕಾಲುಗಳು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ.
ಸಿದ್ಲೀಪುರ ಗ್ರಾಮದ ಮಂಜು (35) ಮೃತ ಕಾರ್ಮಿಕ. ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಿದ್ದ ತಾತ್ಕಾಲಿಕ ಕಟ್ಟಡ ಕೆಡವಲು ಮಂಜು ಮತ್ತು ಆತನ ಸಹೋದರ ಮುತ್ತು ಮುಂದಾಗಿದ್ದರು. ಈ ವೇಳೆ, ಸಮುಚ್ಚಾಯ ಕಟ್ಟಡದ ಒಂದು ಭಾಗದ ಗೋಡೆ ದಿಢೀರನೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಮಂಜು ಸ್ಥಳದಲ್ಲೇ ಮೃತಪಟ್ಟರೆ, ಆತನ ಸಹೋದರ ಮುತ್ತು ಅವರ ಕೈ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಮುತ್ತುವನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.