Vijayapura: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ಸಾವು
ಆಟವಾಡಲು ಹೋದ ಮೂವರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾ ಗ್ರಾಮದಲ್ಲಿ ನಡೆದಿದೆ.
ಶಿವಮ್ಮ ರಾಥೋಡ್ (8), ಕಾರ್ತಿಕ್ ರಾಥೋಡ್ (7) ಮತ್ತು ಸ್ವಪ್ನಾ ರಾಥೋಡ್ (12) ಮೃತ ಮಕ್ಕಳು. ಸ್ಥಳೀಯ ಮೂಲಗಳ ಪ್ರಕಾರ, ಈ ಮಕ್ಕಳು ಕುರಿಗಳ ಜೊತೆ ಆಟವಾಡುತ್ತಿದ್ದ ಸಮಯದಲ್ಲಿ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಹಳ ಹೊತ್ತಾದರೂ ಮಕ್ಕಳು ಬಾರದಿರುವ ಹಿನ್ನಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಸಂಶಯ ಬಂದು ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಮೂವರು ಮಕ್ಕಳ ಶವ ಪತ್ತೆಯಾಗಿದೆ.
ಈ ಪ್ರಕರಣವು ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನ ಸ್ಥಳಕ್ಕೆ ವಿಜಯಪುರ ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಪೊಸ್ಟ್ ಮಾರ್ಟಮ್ ಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.