Tamil nadu: ವಿಜಯ್ ರ‍್ಯಾಲಿ..! ಘನಘೋರ ದುರಂತ..! 39 ಜನರ ಸಾವು, 50 ಜನ ಚಿಂತಾಜನಕ..!

ಇದೊಂದು ಅತ್ಯಂತ ನೋವಿನ ಸಂಗತಿ. ಹಾಗೂ ಇಂದೆಂದೂ ಕಂಡಿರದ, ಕೇಳಿರದ ಭೀಕರ ದುರಂತ. ತಮಿಳುನಾಡಿನ ಪಾಪುಲರ್‌ ಸ್ಟಾರ್‌ ಹಾಗೂ ಪೊಲಿಟಿಷಿಯನ್‌ ವಿಜಯ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಿರೋ ಆರಂಭದಲ್ಲೇ ಮಹಾ ದುರಂತವೊಂದು ತಮಿಳುನಾಡಿನಲ್ಲಿ ನಡೆದು ಹೋಗಿದೆ. ಅಸಂಖ್ಯಾತ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಪ್ರಾಣವನ್ನು ಲೆಕ್ಕಿಸದೇ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಹೋಗಿ ಬರೋಬ್ಬರಿ 39 ಕ್ಕೂ ಅಧಿಕ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

2026 ರ ಚುನಾವಣೆಗೆ ಭರ್ಜರಿ ಪ್ರಚಾರ ಮಾಡ್ತಿರೋ ನಟ ವಿಜಯ್‌ ಕರೂರ್‌ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಇಂತದ್ದೊಂದು ಮಹಾ ದುರಂತ ನಡೆದುಹೋಗಿದೆ. ಇಡೀ ದೇಶವೇ ಸಾವನ್ನಪ್ಪಿದವ್ರ ಕುಟುಂಬಗಳಿಗೆ ಸಂತಾಪ ಸೂಚಿಸ್ತಿದೆ. ಅಸಲಿಗೆ ಈ ಘಟನೆ ನಡೆದಿದ್ದೇಗೆ..? ಇಂತದ್ದೊಂದು ಅವಘಡ ಸಂಭವಿಸಲು ಮೂಲ ಕಾರಣಗಳೇನು..? ಭದ್ರತಾ ವೈಫಲ್ಯವೇ..? ಆಯೋಜಕರ ಎಡವಟ್ಟೇ..? ಅಥವಾ ಇದಕ್ಕೆ ನಟ ವಿಜಯ್‌ ಮಾಡಿದ ಲೋಪದೋಷಗಳೇನು ಅನ್ನೋ ಕಂಪ್ಲೀಟ್‌ ಡಿಟೈಲ್ಸ್‌ನಾ ನೋಡ್ತಾ ಹೋಗೋಣ.

ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಿನಿಂದ ದಳಪತಿ ವಿಜಯ್‌ ಒಂದಲ್ಲಾ ಒಂದು ವಿವಾದಕ್ಕೆ ಗುರಿಯಾಗುತ್ತಲೇ ಇದ್ದಾರೆ. ಕೆಲದಿನಗಳ ಹಿಂದಷ್ಟೇ ತಮಿಳುನಾಡಿನಲ್ಲಿ ರ‍್ಯಾಲಿ ವೇಳೆ ಸಾರ್ವಜನಿಕರಿಗೆ ಹಲ್ಲೆ ಮಾಡಿದ ಆರೋಪ ವಿಜಯ್ ಮತ್ತು ಬೌನ್ಸರ್‌ ಮೇಲೆ ಬಂದಿತ್ತು, ಇದೀಗ ಈ ಪ್ರಕರಣ ಮಾಸುವ ಮುನ್ನವೇ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ಘನಘೋರ ದುರಂತ ಸಂಭವಿಸಿದೆ. ನಟ ವಿಜಯ್‌, ತಮಿಳಗ ವೆಟ್ರಿ ಕಳಗಂ ಅನ್ನೋ ಪಕ್ಷ ಸ್ಥಾಪನೆ ಮಾಡಿದ್ಮೇಲೆ ಅವ್ರ ವರ್ಚಸ್ಸು, ಅಭಿಮಾನಿ ಬಳಗ, ಬೆಂಬಲಿಗರ ಗುಂಪು ಹತ್ತು ಪಟ್ಟು ಹೆಚ್ಚಾಗಿದೆ ಅನ್ನೋದನ್ನು ಅವ್ರ ಒಂದೊಂದು ಕಾರ್ಯಕ್ರಮಗಳೇ ಸಾರಿ ಸಾರಿ ಹೇಳುತ್ತವೆ.

ಈ ನಡುವೆ, ಸಾವಿರಾರು ಸಂಖ್ಯೆಯಲ್ಲಿ ಸೇರಿಬೇಕಾಗಿದ್ದ ರ‍್ಯಾಲಿಯಲ್ಲಿ 50 ಸಾವಿರಕ್ಕೂ ಹೆಚ್ಚಾಗಿ ಸೇರಿದ ಬೆಂಬಲಿಗರು ತನ್ನ ನೆಚ್ಚಿನ ನಟನನ್ನು ನೋಡಲು ಕಾದು ಕುಳಿತಿದ್ದಾರೆ. ಮದ್ಯಾಹ್ನ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ತಡವಾಗಿ ವಿಜಯ್‌ ಆಗಮಿಸಿದ್ದಾರೆ. ಅದಾಗ್ಲೇ ಹೈರಾಣಾಗಿ ಹೋಗಿದ್ದ ಅಭಿಮಾನಿಗಳು, ಬೆಂಬಲಿಗರು ಸುಸ್ತಾಗಿ ಹೋಗಿಬಿಟ್ಟಿದ್ರು. ಇದೂ ಕೂಡ ಕಾಲ್ತುಳಿತಕ್ಕೆ ಸಿಕ್ಕವರ ಉಸಿರಾಟದಲ್ಲಿ ಸಮಸ್ಯೆ ಉಂಟಾಗಲು ಕಾರಣವಾಗಿದೆ. ಈ ವೇಳೆಗಾಗಲೇ ವಿಪರೀತ ಜನಸಂದಣಿ ಮತ್ತು ಬಿಸಿಲಿನ ಬೇಗೆಯಿಂದಾಗಿ ಹಲವರು ಮೂರ್ಛೆ ಹೋಗಿ ಬಿದ್ದ ಘಟನೆಗಳು ಕೂಡ ನಡೆದಿದ್ದವು.

ಇವರನ್ನೆಲ್ಲಾ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಂದು ಸಮಯದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ಎಚ್ಚೆತ್ತುಕೊಂಡಿ ಭವಿಷ್ಯದ ಅಪಾಯವನ್ನು ನೆನೆದು ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ನೆರವಿಗಾಗಿ ಪೊಲೀಸರಿಗೆ ವಿನಂತಿಯನ್ನು ಮಾಡಿದ ಘಟನೆ ನಡೆದಿತ್ತು. ಅವರು ವೇದಿಕೆಯಿಂದಲೇ ಜನರಿಗೆ ನೀರಿನ ಬಾಟಲಿಗಳನ್ನು ಎಸೆದು ಸಹಾಯ ಮಾಡಲು ತೀವ್ರ ಪ್ರಯತ್ನ ಕೂಡ ನಡೆಸಿದರು.

ಕ್ಷಣ ಕ್ಷಣಕ್ಕೂ ಏರ್ತಿರೋ ಸಾವಿನ ಸಂಖ್ಯೆ ಬೆಚ್ಚಿ ಬೀಳಿಸ್ತಿದೆ. ಆಸ್ಪತ್ರೆಯಲ್ಲಿ ತಮ್ಮವರನ್ನು ಕಳೆದುಕೊಂಡವ್ರ ಚೀತ್ಕಾರ ಹೇಳತೀರದಾಗಿದೆ. 33 ಕ್ಕೂ ಅಧಿಕ ಜನ್ರು ಸಾವನ್ನಪ್ಪಿದ್ರೆ, 50 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ಕಾಲ್ತುಳಿತಕ್ಕೆ ನಿಖರ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲದಿದ್ದರು, ಅಸ್ವಸ್ಥರನ್ನು ಕರೆದೊಯ್ಯಲು ಸುಲಭವಾಗಿ ಆಂಬುಲೆನ್ಸ್‌ ಕೂಡ ಸ್ಥಳಕ್ಕೆ ಬರುವಂತಿರಲಿಲ್ಲ ಅನ್ನೋ ವಿಷಾಧನೀಯ ಸಂಗತಿಗಳು ದುರಂತ ನಡೆದ ಸ್ಥಳದ ವಾಸ್ತವ ಭಯಾನಕ ದೃಶ್ಯಗಳನ್ನು ಬಿಚ್ಚಿಡ್ತಿವೆ.

ವಿಜಯ್ ಅವರ ಟಿವಿಕೆ ಪಕ್ಷದ ಪರವಾಗಿ ಕರೂರಿನಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ 31 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಹೇಳಿದ್ದಾರೆ. ಇನ್ನು ಈ ದುರಂತದಲ್ಲಿ 6 ಮಕ್ಕಳು, 16 ಮಹಿಳೆಯರು ಮತ್ತು 9 ಪುರುಷರು ಸೇರಿದಂತೆ ಒಟ್ಟು 31 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವರು ಹೇಳಿದರು. ಇನ್ನು 40 ಜನರ ಸ್ಥಿತಿ ಗಂಭೀರವಾಗಿದೆ ಎಂದು ಸದ್ಯ ವರದಿಯಾಗಿದೆ. ಆದ್ರೆ ಇದು ಅಂತಿಮ ವರದಿಯೂ ಅಲ್ಲ. ಆಸ್ಪತ್ರೆಯಲ್ಲಿ ಅನೇಕರು ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾರೆ.

ವಿಜಯ್ ಮಾತನಾಡುವಾಗ ಎಲ್ಲರೂ ದೂರದಲ್ಲಿ ನಿಂತಿದ್ದರು. ಕರೆಂಟ್‌ ಕೂಡ ಆಫ್‌ ಆಯ್ತು. ವಿಜಯ್ ಹೇಳುತ್ತಿರುವುದು ಅವರಿಗೆ ಕೇಳಿಸಲಿಲ್ಲ. ಆದ್ದರಿಂದ ಅವರು ಸ್ವಲ್ಪ ಮುಂದೆ ಹೋದರು. ಮುಂದೆ ಹೋಗಲು ಅವರು ತುಂಬಾ ಉತ್ಸುಕರಾಗಿದ್ದರು ಕೂಡ. ಇದೇ ಕಾರಣದಿಂದ ಕಾಲ್ತುಳಿತ ಉಂಟಾಯಿತು ಎಂದು ಮೂರ್ಛೆ ಹೋದ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಆಂಬ್ಯುಲೆನ್ಸ್‌ನಲ್ಲಿದ್ದ ಮಹಿಳೆಯೊಬ್ಬರು ಹೇಳಿದ್ದಾರೆ.

ಇನ್ನೊಬ್ಬ ಮಹಿಳೆ ಆಂಬುಲೆನ್ಸ್‌ನಲ್ಲಿ ಮತ್ತೊಂದು ಆಘಾತಕಾರಿ ಅಂಶವೊಂದನ್ನು ಹಂಚಿಕೊಂಡಿದ್ದಾರೆ. ಬಸ್ ಆಗಾಗ್ಗೆ ಬರುತ್ತಿದ್ದರಿಂದ, ಅನೇಕ ಜನರು ತಳ್ಳಲು ಪ್ರಾರಂಭಿಸಿದರು. ಎಲ್ಲಾ ಪುರುಷರು ಮತ್ತು ಮಹಿಳೆಯರು ತಳ್ಳಲು ಪ್ರಾರಂಭಿಸಿದರು. ನಾವು ಬಂದ ಆಂಬ್ಯುಲೆನ್ಸ್‌ನಲ್ಲಿ ಒಟ್ಟು 4 ಜನರು ಬಂದರು. ಅವರಲ್ಲಿ 3 ಜನರು ಸತ್ತರು. ಅನೇಕ ಜನರು ಮೂರ್ಛೆ ಹೋದರು. ನಾವು ವಿಜಯ್ ಪ್ರಚಾರ ಸಭೆಯೊಳಗೆ ಹೋಗಲಿಲ್ಲ. ಒಳಗೆ ಹೋದರೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಭಾವಿಸಿ ಹೊರಗೆ ಬಂದೆವು. ನಾವು ಪಕ್ಕಕ್ಕೆ ನಿಂತೆವು.

ಮದ್ಯಾಹ್ನ 11 ಗಂಟೆಗೆ ನಡೆಯಬೇಕಾಗಿರೋ ಪಬ್ಲಿಕ್‌ ಮೀಟ್‌ ಇದು. ಏಳು ಗಂಟೆಗೆ ನಡೆಯಬೇಕಾಗಿ ಬಂತು. ಕೋರ್‌ ಕಮಿಟಿ ಮೀಟಿಂಗ್‌ ಮಾಡಿ, ಪೊಲೀಸ್‌ ಅನುಮತಿ ಪಡೆದು ನಾಮಕ್ಕಲ್‌ ನಲ್ಲಿನ ಫಂಕ್ಷನ್‌ ಮುಗಿಸಿ ಕರೂರ್‌ಗೆ ಹೊರಟಿದ್ರು. ಸರಿಯಾಗಿ 20 ರಿಂದ 30 ಜನ ಆ ಸಮಯದಲ್ಲೇ ಮೂರ್ಛೆ ಹೋಗಿ ಬಿದ್ದಿದ್ದಾರೆ.

ವಿಜಯ್ ಅವರ ಕರೂರ್ ರ‍್ಯಾಲಿಯ ಅನುಮತಿ ಪತ್ರದಲ್ಲಿ 10,000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಉಲ್ಲೇಖಿಸಲಾಗಿದೆ, ಆದರೆ ಅಧಿಕಾರಿಗಳು 1.20 ಲಕ್ಷ ಚದರ ಅಡಿ ವಿಸ್ತೀರ್ಣದ ಸ್ಥಳದಲ್ಲಿ ಸುಮಾರು 50,000 ಜನರು ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಹಲವಾರು ಜನರು ಆಸ್ಪತ್ರೆಗೆ ದಾಖಲಾದ ನಂತರ, ಕರೂರಿನಲ್ಲಿ ಜನಸಮೂಹವನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಅಸ್ವಸ್ಥರಾದವರಿಗೆ ಸಹಾಯ ಮಾಡಲು ನೀರಿನ ಬಾಟಲಿಗಳನ್ನು ವಿತರಿಸಲಾಯಿತು ಮತ್ತು ವೈದ್ಯಕೀಯ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು, ಹಲವಾರು ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ದುರಂತದ ಒಂದೊಂದು ದೃಶ್ಯವೂ ಭಯಾನಕವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ 46 ಜನರು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಕೆಲಸಕ್ಕೆ ಕರೆಯಲಾಗಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಇದಲ್ಲದೆ, ನಾಮಕ್ಕಲ್ ಮತ್ತು ಸೇಲಂ ಜಿಲ್ಲೆಗಳ ವೈದ್ಯರನ್ನು ಕರೆಯಲು ಆದೇಶಿಸಲಾಗಿದೆ. ಅವರು ಇಂದು ರಾತ್ರಿ ಚಿಕಿತ್ಸೆ ನೀಡಲು ಬರುತ್ತಿದ್ದಾರೆ. ಅಗತ್ಯ ಔಷಧಿಗಳು, ಮಾತ್ರೆಗಳು ಮತ್ತು ವೈದ್ಯಕೀಯ ಉಪಕರಣಗಳು ಇವೆ. ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವವರಿಗೆ ಯಾವುದೇ ಶುಲ್ಕ ವಿಧಿಸಬಾರದು. ಅವರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಖುದ್ದಾಗಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಸ್ಟಾಲಿನ್‌ ತುರ್ತು ಸಭೆ ಕರೆದಿರೋದ್ರಿಂದ ಈ ದುರಂತದ ವಿಚಾರಣಾ ಸಮಿತಿ ರಚನೆ ಮಾಡಿ, ವಿಜಯ್‌ ವಿರುದ್ಧ ತುರ್ತು ಕ್ರಮವನ್ನು ತೆಗೆದುಕೊಳ್ಳಬಹುದು. ಇದೆಲ್ಲದ್ರ ನಡುವೆ, ತಮಿಳುನಾಡಿನ ಕರೂರಿನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಮತ್ತು ಮೆಗಾಸ್ಟಾರ್ ವಿಜಯ್ ಅವರ ರ‍್ಯಾಲಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರ‍್ಯಾಲಿಗಾಗಿ ಸ್ಥಳದಲ್ಲಿ ಜಮಾಯಿಸಿದ್ದ ಬೃಹತ್ ಜನಸಮೂಹದಿಂದ ಅಪರಿಚಿತ ವ್ಯಕ್ತಿಯೊಬ್ಬ ನಟನ ಮೇಲೆ ಬಸ್ ಮೇಲಿನಿಂದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಚಪ್ಪಲಿ ಎಸೆದಿರುವುದು ವೀಡಿಯೊದಲ್ಲಿದೆ.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X “@tntalksofficial” ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರ‍್ಯಾಲಿಯ ಸಮಯದಲ್ಲಿ ವಿಜಯ್ ಕೈಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವುದನ್ನು ಮತ್ತು ಬಸ್ ಸುತ್ತಲೂ ಜನಸಮೂಹದ ಸಮುದ್ರವೇ ಕಾಣುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅವರು ಬಸ್ಸಿನ ಮೇಲಿನಿಂದ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಬಸ್ಸಿನ ಮೇಲ್ಭಾಗದಲ್ಲಿದ್ದ ಕಾವಲುಗಾರರು ಏನೋ ವಿಚಿತ್ರವನ್ನು ಗಮನಿಸಿದರು.

ಜನಸಂದಣಿಯಿಂದ ವಿಜಯ್ ಮೇಲೆ ಚಪ್ಪಲಿ ಎಸೆಯುವುದನ್ನು ಅವರು ನೋಡಿದರು, ಆದರೆ, ಎಚ್ಚರಗೊಂಡ ಭದ್ರತಾ ಸಿಬ್ಬಂದಿ ಚಪ್ಪಲಿಯನ್ನು ತಡೆದು ನಟನಿಗೆ ಬಡಿಯದಂತೆ ತಡೆದರು. ನಟ ಚಪ್ಪಲಿ ಎಸೆದ ಸ್ಥಳದಿಂದ ಇನ್ನೊಂದು ಬದಿಗೆ ಮುಖ ಮಾಡಿದ್ದ. ನಟನ ಮೇಲೆ ಚಪ್ಪಲಿ ಎಸೆದ ವ್ಯಕ್ತಿ ಸಿಕ್ಕಿಬೀಳಲಿಲ್ಲ ಮತ್ತು ಜನಸಮೂಹ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಅದೃಷ್ಟವಶಾತ್, ಭದ್ರತಾ ಸಿಬ್ಬಂದಿಯ ಜಾಗರೂಕತೆಯಿಂದ ವಿಜಯ್ ಅವಮಾನದಿಂದ ಪಾರಾದರು. ಆದಾಗ್ಯೂ, ಸ್ಥಳದಲ್ಲೇ ಇಂತದ್ದೊಂದು ಘನಘೋರ ದುರಂತ ಘಟನೆ ನಡೆದುಹೋಗಿದೆ. ಸ್ಟಾಂಪೇಡ್‌ನಲ್ಲಿ ಪ್ರಾಣ ತೆತ್ತವ್ರಿಗೆ 10 ಲಕ್ಷ ಪರಿಹಾರ ಧನ ಕೂಡ ನೀಡಲಾಗ್ತಿದೆ. ಆದ್ರೆ, ಒಮ್ಮೆ ಹೋದ ಜೀವ ಮತ್ತೆ ಬರುತ್ತಾ..?

Rakesh arundi

Leave a Reply

Your email address will not be published. Required fields are marked *