Varshitha murder: ವರ್ಷಿತಾಳ ಹತ್ಯೆ ಪ್ರಕರಣ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದದಿಂದ ವಿಚಾರಣೆ
ಚಿತ್ರದುರ್ಗ ನಗರದ ಹೊರವಲಯ ಗೋನೂರು ಹೋಟೆಲ್ ವೊಂದರ ಸಮೀಪ ನಡೆದಿದ್ದ ಹಿರಿಯೂರು ತಾಲೂಕು ಕೋವೆರಹಟ್ಟಿಯ ವಿದ್ಯಾರ್ಥಿನಿ ವರ್ಷಿತಾಳ ಭೀಕರ ಹತ್ಯೆ ಪ್ರಕರಣ ಕುರಿತಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆಯೋಗದ ನಿರ್ದೇಶಕ ಜಗನ್ನಾಥ್ ವಿಚಾರಣೆಗಾಗಿ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ್ದರು.
ಜಿಲ್ಲಾಧಿಕಾರಿ ವೆಂಕಟೇಶ್,ಎಸ್ ಪಿ ರಂಜಿತ್‌ಕುಮಾರ್ ಬಂಡಾರು ಹಾಗೂ ಜಿಪಂ ಪಿಇಒ ಡಾ.ಎಸ್. ಆಕಾಶ್ ಅವರೊಂದಿಗೆ ಚರ್ಚಿಸಿದ ನಿರ್ದೇಶಕರು,ಎಸ್ ಪಿ ಅವರೊಂದಿಗೆ ಹತ್ಯೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿನಿ ಓದುತ್ತಿದ್ದ ನಗರದ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ಕೊಟ್ಟು ದಾಖಲೆಗಳನ್ನು ಪರಿಶೀಲಿಸಿದರು. ಹಿರಿಯೂರು ತಾಲೂಕು ಕೋವೆರಹಟ್ಟಿಯ ವರ್ಷಿತಾ ಮನೆಗೆ ಭೇಟಿ ನೀಡಿ, ಆಕೆಯ ತಾಯಿ ಜ್ಯೋತಿ ಅವರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ದೊರಕುವ ಸೌಲಭ್ಯ ನೀಡಲಾಗಿದ್ದು, ಇನ್ನೂ ಹೆಚ್ಚಿನ ಸೌಲಭ್ಯಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಚಿತ್ರದುರ್ಗ ಬಳಿ ಹತ್ಯೆಯಾದ ಯುವತಿ ವರ್ಷಿತಾಳ ಹೋಬಳಿಯ ಕೋವೆರಹಟ್ಟಿ ಗ್ರಾಮದ ಮನೆಗೆ ಶುಕ್ರವಾರ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಬೆಂಗಳೂರು ಕಛೇರಿ ನಿರ್ದೇಶಕ ಜೆ .ಜಗನ್ನಾಥ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಅಹವಾಲು ಆಲಿಸಿದರು.
ಮೃತಳ ತಾಯಿ ಮಾತನಾಡಿ, ಕಡು ಬಡತನವಿದ್ದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದೆವು. ನಮ್ಮ ಮಗಳನ್ನು ಹತ್ಯೆ ಮಾಡಿದವನಿಗೆ ಶಿಕ್ಷೆಯಾಗಬೇಕು. ಮಗಳ ಸಾವಿಗೆ ನ್ಯಾಯ ಕೊಡಿಸಬೇಕು. ಇನ್ನೊಬ್ಬ ಮಗಳಿಗೆ ಸರ್ಕಾರಿ ನೌಕರಿ ಕೊಡಿಸಬೇಕೆಂದು ಮನವಿ ಮಾಡಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಜೆ .ಜಗನ್ನಾಥ್ ನ್ಯಾಯಯುತ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು, ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಕೊಡಿಸಲಾಗುವುದು. ಈಗಾಗಲೇ ಮೃತಳ ತಾಯಿಗೆ ಗುತ್ತಿಗೆ ಆಧಾರದ ಮೇಲೆ ಬುರುಜಿನರೊಪ್ಪ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಕೆಲಸ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಮಹಮ್ಮದ್ ಜಿಲಾನಿ ಖುರೇಷಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ದಿನೇಶ್, ಪರಮೇಶ್ವರಪ್ಪ, ಪಿಎಸ್ ಐಗಳಾದ ಎಂ.ಟಿ. ದೀಪು, ಭೀಮನಗೌಡ ಪಾಟೀಲ್ ಇತರರಿದ್ದರು.