Udupi: ಹಾಡಹಗಲೇ ರೌಡಿಶೀಟರ್ ಹತ್ಯೆ.ಉಡುಪಿಯಲ್ಲಿ ಆತಂಕ
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಶನಿವಾರ ದುಷ್ಕರ್ಮಿಗಳು ರೌಡಿಶೀಟರ್‌ನನ್ನು ಹಾಡಹಗಲೇ ಗುಂಡಿಕ್ಕಿ ಪರಾರಿಯಾಗಿರೋ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳು ಕಣ್ಣಾರೆ ಈ ಘಟನೆಯನ್ನು ಕಂಡಿದ್ದು, ದಾಳಿಕೋರರು ಹಲವಾರು ಬಾರಿ ಗುಂಡು ಹಾರಿಸಿ ಕೃತ್ಯ ಎಸಗಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಮಣಿಪಾಲ ನಿವಾಸಿಯಾದ ಸೈಫುದ್ದೀನ್ ಎಂದು ಗುರುತು ಹಚ್ಚಲಾಗಿದ್ದು, 38 ವರ್ಷ ವಯಸ್ಸಾಗಿದೆ. ಸೈಫುದ್ದೀನ್ ಸಾರಿಗೆ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದು ಮತ್ತು ಈ ಹಿಂದೆ ಹಲವಾರು ಕ್ರಿಮಿನಲ್ ಕೇಸ್‌ಗಳ ಹಿನ್ನೆಲೆ ಕೂಡ ಹೊಂದಿದ್ದ. ಆತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ಕೂಡ ದಾಖಲಾಗಿವೆ. ಕೊಲೆಗೆ ನಿಖರವಾದ ಕಾರಣ ಏನೆಂಬುದನ್ನು ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಸೈಫುದ್ದೀನ್ ಅವರ ಕೆಲಸದ ಸ್ಥಳದ ಬಳಿಯೇ ಆತನ ಮೇಲೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 10.30 ರ ಸುಮಾರಿಗೆ ಅಪರಿಚಿತ ಹಲ್ಲೆಕೋರರ ಗುಂಪು ಅವರ ಮೇಲೆ ಗುಂಡು ಹಾರಿಸಿದೆ.ಪ್ರತ್ಯಕ್ಷದರ್ಶಿಗಳು ಹೇಳುವಂತೆ ದಾಳಿಕೋರರು ಹಲವಾರು ಬಾರಿ ಗುಂಡು ಹಾರಿಸಿದ್ದಾರೆ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರ ಟೀಮ್‌ಗಳನ್ನು ರಚಿಸಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಹತ್ಯೆಯ ಹಿಂದಿನ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈಗಾಗ್ಲೇ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದ್ದು, ಪೊಲೀಸರು ಗಸ್ತು ತಿರುಗುತ್ತಿದ್ದಾರೆ.