Yashwant Sardeshpande Death: ರಂಗಭೂಮಿ ನಟ, ಕಲಾವಿದ ಯಶವಂತ ಸರದೇಶಪಾಂಡೆ ನಿಧನ
ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಯಶವಂತ ಸರದೇಶಪಾಂಡೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿತು. ಕೂಡಲೆ ಅವರನ್ನ ಹತ್ತಿರದ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಯಶವಂತ್ ಸರ್‌ದೇಶಪಾಂಡೆ ಅವರ ಹಠಾತ್ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ್ಮ ಹುಬ್ಬಳ್ಳಿಯ ಶ್ರೀ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾತ್ರವಹಿಸುತ್ತಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ವರ್ಗಕ್ಕೆ , ನಾಟಕ ಪ್ರೇಮಿಗಳಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ
ಯಶವಂತ ಅವರು ನಾಟಕಗಳನ್ನು ನಿರ್ದೇಶಿಸಿ, ಅವುಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ಅವರು ಮುಖ್ಯವಾಗಿ ಹಾಸ್ಯ ನಾಟಕಗಳಲ್ಲಿ ನಟಿಸುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿಯೂ ನಾಟಕಗಳನ್ನು ಮಾಡಿದ್ದರು. ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಯಶವಂತ ಅವರು ನಾಟಕಗಳಲ್ಲಿ ಮಾತ್ರವಲ್ಲದೆ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲೂ ನಟಿಸಿದ್ದರು. ಅಲ್ಲಿಯೂ ಹಾಸ್ಯ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದರು. ‘ಆಲ್ ದಿ ಬೆಸ್ಟ್’ ನಾಟಕ ಅಭೂತಪೂರ್ವ ಯಶಸ್ಸು ಕಂಡಿತ್ತು.‘ರಾಮ ಶ್ಯಾಮ ಭಾಮಾ’ ಸಿನಿಮಾದಲ್ಲಿ ನಟಿಸಿ ಅವರು ಗಮನ ಸೆಳೆದಿದ್ದರು.
ಯಶವಂತ ಸರದೇಶಪಾಂಡೆ ಅವರ ನಾಟಕಗಳು
ನಾಟಕಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಯಶವಂತ ಸರದೇಶಪಾಂಡೆ ‘ಅಂಧಯುಗ’, ‘ಇನ್‌ಸ್ಪೆಕ್ಟರ್ ಜನರಲ್’, ‘ಮಿಡ್‌ಸಮರ್ ನೈಟ್ಸ್‌ಡ್ರೀಮ್’, ‘ಬಾಡಿಗೆ ಮನೆ’, ‘ಕಿತ್ತೂರು ರಾಣಿ ಚೆನ್ನಮ್ಮ’, ‘ಪುಷ್ಪರಾಣಿ’ ಮುಂತಾದ 60ಕ್ಕೂ ಹೆಚ್ಚು ನಾಟಕಗಳನ್ನ ನಿರ್ದೇಶನ ಮಾಡಿದ್ದಾರೆ. ಇವರ ‘ಆಲ್ ದಿ ಬೆಸ್ಟ್’ ನಾಟಕ ಅಭೂತಪೂರ್ವ ಯಶಸ್ಸು ಗಳಿಸಿತ್ತು.
ಯಶವಂತ ಸರದೇಶಪಾಂಡೆ ನಟಿಸಿದ್ದ ಸಿನಿಮಾ, ಸೀರಿಯಲ್‌ಗಳು
‘ಯದ್ವಾ-ತದ್ವಾ’, ‘ಬಣ್ಣದ ಬುಗುರಿ’, ‘ದಶಾವತಾರ’, ‘ಪರ್ವ’, ‘ತುಂತುರು’ ಮುಂತಾದ ಸೀರಿಯಲ್‌ಗಳಲ್ಲಿ ಯಶವಂತ ಸರದೇಶಪಾಂಡೆ ನಟಿಸಿದ್ದರು. ‘ಮರ್ಮ’, ‘ಜೂಜಾಟ’, ‘ಸ್ಟೂಡೆಂಟ್’, ‘ಅಮೃತಧಾರೆ’, ‘ರಾಮ ಶಾಮ ಭಾಮ’ ಮುಂತಾದ ಸಿನಿಮಾಗಳಲ್ಲಿ ಯಶವಂತ ಸರದೇಶಪಾಂಡೆ ಮಿಂಚಿದ್ದರು. ‘ರಾಮ ಶಾಮ ಭಾಮ’ ಚಲನಚಿತ್ರಕ್ಕೆ ಯಶವಂತ ಸರದೇಶಪಾಂಡೆ ಸಂಭಾಷಣೆಯನ್ನೂ ಬರೆದಿದ್ದರು.