Villagers achieved justice: ಹೋರಾಟಗಾರನ ಕೊಲೆಗೆ ನ್ಯಾಯ ದಕ್ಕಿಸಿಕೊಂಡ ಗ್ರಾಮಸ್ಥರು
ನ್ಯಾಯಕ್ಕಾಗಿ ಹೋರಾಡುವ ಮುಂಚೂಣಿ ನಾಯಕ ಹಿಂದೆ ಸರಿದಾಗ ಅಥವಾ ಆತನನ್ನೇ ಕೊಲೆ ಮಾಡಿದಾಗ ಹಿಂಬಾಲಕರು, ಸಂಬಂಧಿಕರು ಹೋರಾಟವನ್ನೇ ಕೈಬಿಡುವ ಹಲವು ಘಟನೆಗಳನ್ನು ನೋಡಿದ್ದೇವೆ. ಆದರೆ, ತಾಲೂಕಿನ ಗೌಂಡವಾಡ ಗ್ರಾಮಸ್ಥರು ತಮ್ಮ ಮುಂದಾಳುವಿನ ಹತ್ಯೆಗೆ ನ್ಯಾಯ ಬೇಡಿ ಹೋರಾಟ ನಡೆಸುವ ಜತೆಗೆ ಅಪರಾಧಿ ಗಳಿಗೆ ಶಿಕ್ಷೆಯೂ ಆಗುವಂತೆ ಮಾಡಿರುವುದು ಅವರ ಒಗ್ಗಟ್ಟು ಹಾಗೂ ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಎತ್ತಿ ತೋರಿಸಿದೆ.
ಬೆಳಗಾವಿ ತಾಲೂಕಿನ ಗೌಂಡವಾಡದ ಕಾಲಭೈರವನಾಥ ದೇವಾಲಯದ 27 ಎಕರೆ ಜಮೀನು ಕಬಳಿಕೆ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸತೀಶ ಪಾಟೀಲ ಧ್ವನಿ ಎತ್ತಿದಾಗ ಎರಡೂರು ಬಾರಿ ಹಲ್ಲೆಗೈದು, ಬೆದರಿಕೆಯೊಡ್ಡಿ ಬಾಯಿ ಮುಚ್ಚಿಸಲು ಪ್ರಯತ್ನಿಸಲಾಗಿತ್ತು. ಆದರೆ, ದೇವಸ್ಥಾನದ ಜಮೀನು ಉಳಿಸಲು ಪಣತೊಟ್ಟು ಹೋರಾಟ ಮುಂದುವರಿಸಿದಾಗ 2022ರ ಜೂನ್ 18ರಂದು ದುಷ್ಕರ್ಮಿಗಳು ಸತೀಶ ಅವರನ್ನು ಹತ್ಯೆಗೈದಿದ್ದರು. ಇದರಿಂದ ಗ್ರಾಮಸ್ಥರ ಆಕ್ರೋಶ ಹಾಗೂ ಕಣ್ಣೀರು ಜ್ವಾಲಮುಖಿ ಆಯಿತು. ವಾಹನಗಳಿಗೆ ಬೆಂಕಿ, ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟದಂತಹ ಪ್ರತಿಭಟನೆಗಳು ನಡೆದು ಉದ್ವಿಗ್ನತೆ ಉಂಟಾಯಿತು.
ನೊಂದವರಿಗೆ ಗ್ರಾಮಸ್ಥರ ಸಾಥ್
ಭೂ ಕಬಳಿಕೆ ವಿರುದ್ಧದ ಹೋರಾಟದಲ್ಲಿ ಇಡೀ ಊರಿಗೇ ಭರವಸೆಯ ಬೆಳಕಾಗಿದ್ದ ಸಾಮಾಜಿಕ ಕಾರ್ಯಕರ್ತ ಜೀವ ಕಳೆದುಕೊಂಡದ್ದು ಗ್ರಾಮಸ್ಥರನ್ನು ರೊಚ್ಚಿಗೆಬ್ಬಿಸಿತು. ಸಂತ್ರಸ್ತನ ತಾಯಿ ಹಾಗೂ ಪತ್ನಿಯ ಜತೆಗೆ ಗಟ್ಟಿಯಾಗಿ ನಿಂತು ನ್ಯಾಯಕ್ಕಾಗಿ ಮೂರು ವರ್ಷ ಹೋರಾಟ ನಡೆಸಿದರು.
ದಕ್ಷ ತನಿಖಾಧಿಕಾರಿಗಾಗಿ ಪ್ರತಿಭಟನೆ
ಪ್ರಕರಣಕ್ಕೆ ಸಂಬಂಧಿಸಿದಂತೆ 25 ಜನರ ವಿರುದ್ಧ ದೂರು ದಾಖಲಾಯಿತು. ಕಾಕತಿ ಠಾಣೆಯಲ್ಲಿ ತನಿಖೆ ದಿಕ್ಕು ತಪ್ಪುತ್ತಿರುವದನ್ನು ಅರಿತ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದರು. ಹಾಗಾಗಿ, ಎಸಿಪಿ ಸದಾಶಿವ ಕಟ್ಟಿಮನಿ ಅವರನ್ನು ತನಿಖಾಧಿ ಕಾರಿಯಾಗಿ ನೇಮಿಸಲಾಯಿತು. ಸಮರ್ಪಕ ತನಿಖೆ ನಡೆಸಿದ ಅವರು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಶೀಶ ಕುಟುಂಬದೊಂದಿಗೆ ಪ್ರತಿ ಬಾರಿ ಕೋರ್ಟ್, ಪೊಲೀಸ್ ಠಾಣೆಗೆ ಹೆಜ್ಜೆ ಹಾಕುತ್ತಿದ್ದ ಗ್ರಾಮಸ್ಥರು ಮನೆಯಿಂದಲೇ ಊಟ ಕಟ್ಟಿಕೊಂಡು ಬಂದು ಹೋರಾಟ ಮಾಡಿದರು.
ಐವರಿಗೆ ಜೀವಾವಧಿ ಶಿಕ್ಷೆ
ಇತ್ತೀಚೆಗೆ ಬೆಳಗಾವಿಯ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐವರಿಗೆ ಜೀವಾವಧಿ ಶಿಕ್ಷೆ ನಾಲ್ವರಿಗೆ ಒಂದು ವರ್ಷದ ಶಿಕ್ಷೆ ಹಾಗೂ ಒಟ್ಟು 13.75 ಲಕ್ಷ ರೂ. ದಂಡ ವಿಧಿಸಿತು. ಈ ಮೊತ್ತದಲ್ಲಿ 10 ಲಕ್ಷ ರೂ.ಗಳನ್ನು ಸತೀಶ ಪತ್ನಿಗೆ ಹಾಗೂ 2 ಲಕ್ಷ ರೂ. ಅವರ ತಾಯಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ. ತೀರ್ಪು ಘೋಷಣೆ ದಿನ ನ್ಯಾಯಾಲಯದ ಆವರಣದಲ್ಲಿ ಗೌಂಡವಾಡ ಊರಿಗೂರೇ ನೆರದಿತ್ತು. ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಜನರು ಕಣ್ಣೀರು ಹಾಕಿದರು. ತಮ್ಮೂರಿನ ಹೋರಾಟಗಾರನ ಸಾವಿಗೆ ನ್ಯಾಯ ಸಿಕ್ಕ ಸಂತೃಪ್ತಿ ಆ ಕಣ್ಣೀರಿನಲ್ಲಿ ಪ್ರತಿಫಲಿಸುತ್ತಿತ್ತು. ಅಂದು ವಕೀಲರ ವಲಯದಲ್ಲಿಯೂ ಕಾನೂನಿನ ಕಲಂಗಳಿಗಿಂತ ಗ್ರಾಮಸ್ಥರ ಮಾನವೀಯತೆ ಕುರಿತೇ ಚರ್ಚೆಯಾಗಿದ್ದುಷ.