Mom kills child: ಮಲಗಿದ್ದ ಮಗುವನ್ನು ಸರೋವರಕ್ಕೆ ಎಸೆದ ತಾಯಿ
ಹೆತ್ತ ತಾಯಿಯೊಬ್ಬಳು ಮೂರು ವರ್ಷದ ಮಗುವನ್ನು ಕಲ್ಲು ಬೇಂಚಿನ ಮೇಲೆ ಮಲಗಿಸಿ, ನಿದ್ರೆಗೆ ಜಾರಿದ್ದ ಮಗುವನ್ನು ಸರೋವರಕ್ಕೆ ಎಸೆದು ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯ ಸಕುಲ್ಪುರದ ನಿವಾಸಿ ಅಂಜಲಿ ಸಿಂಗ್ ಅಲಿಯಾಸ್ ಪ್ರಿಯಾ ಎನ್ನಲಾಗಿದೆ.
ಏನಿದು ಪ್ರಕರಣ:
ಉತ್ತರ ಪ್ರದೇಶದ ಮೂಲದವಳಾದ ಅಂಜಲಿ ಈ ಹಿಂದೆ ಓರ್ವನನ್ನು ಮದುವೆಯಾಗಿದ್ದು, ಮೂರೂ ವರ್ಷದ ಹೆಣ್ಣು ಮಗಳಿದ್ದಾಳೆ ಈ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಬೇರ್ಪಟ್ಟಿದ್ದಾರೆ. ಇದಾದ ಬಳಿಕ ಅಂಜಲಿ ರಾಜಸ್ಥಾನದ ಅಜಿರ್‌ನಲ್ಲಿರುವ ಗೆಳೆಯ ಅಖಿಲೇಶ್ ಜೊತೆಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು ಆದರೆ ಅಖಿಲೇಶ್ ಗೆ ಮಗುವನ್ನು ತನ್ನ ಜೊತೆ ಇರಿಸಿಕೊಳ್ಳುವುದು ಇಷ್ಟವಿರಲಿಲ್ಲ ಈ ವಿಚಾರವನ್ನು ಅಂಜಲಿ ಬಳಿ ಅಖಿಲೇಶ್ ಹೇಳಿಕೊಂಡಿದ್ದನಂತೆ. ಇನ್ನು ನಮ್ಮ ಇಬ್ಬರ ಪ್ರೀತಿಗೆ ನಮ್ಮ ಮಗು ತಡೆಯಾಗುವುದು ಬೇಡ ಎಂದು ನಿರ್ಧರಿಸಿದ ತಾಯಿ ಮಗುವನ್ನು ಸರೋವರಕ್ಕೆ ಎಸೆದಿದ್ದಾಳೆ.
ಮಗು ನಾಪತ್ತೆ ನಾಟಕ:
ಪೊಲೀಸರ ಮಾಹಿತಿ ಪ್ರಕಾರ, ಕ್ರಿಶ್ಚಿಯನ್ ಗಂಜ್ ಠಾಣೆಯ ಪೊಲೀಸರು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಜರಂಗ್ ಘರ್ ಛೇದಕ ಬಳಿ ಅಂಜಲಿ ಮತ್ತು ಅಕ್ಲೇಶ್ ಅವರನ್ನು ನೋಡಿದಾಗ ಅವರಿಗೆ ಅನುಮಾನ ಬಂದಿತ್ತು. ಅವರನ್ನು ಪ್ರಶ್ನಿಸಿದಾಗ, ಮಹಿಳೆ ತನ್ನ ಮಗಳು ಕಾಣೆಯಾಗಿದ್ದಾಳೆ ಮತ್ತು ಅವಳನ್ನು ಹುಡುಕುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದಳು.
ಆದರೆ, ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯ ತಿಳಿದಿದೆ. ವಿಚಾರಣೆಯ ನಂತರ, ಅಂಜಲಿ ತನ್ನ ಮಗಳನ್ನು ರೇಲಿಂಗ್ ಕಾಣದ ಭಾಗದ ಮೂಲಕ ಸರೋವರಕ್ಕೆ ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರು ಅನಾ ಸಾಗರ್ ಸರೋವರದಿಂದ ಮಗುವಿನ ಶವವನ್ನು ವಶಪಡಿಸಿಕೊಂಡಿದ್ದಾರೆ.