ವಿಜಯಪುರದ ಸಿಂದಗಿ ಪಟ್ಟಣದಲ್ಲಿ ಒಂದೇ ದಿನ 5 ಬಾರಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ!
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಒಂದೇ ದಿನದಲ್ಲಿ 5 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ.
ಮಧ್ಯಾಹ್ನ 3 ಗಂಟೆ, ರಾತ್ರಿ 10 ಗಂಟೆ 11 ನಿಮಿಷ, 10 ಗಂಟೆ 25 ನಿಮಿಷ, 10 ಗಂಟೆ 47 ನಿಮಿಷ ಮತ್ತು ಇನ್ನೊಮ್ಮೆ ರಾತ್ರಿಯ ವೇಳೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಈ ಘಟನೆಯಿಂದ ಸಿಂದಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮನೆಮಾಡಿದೆ.
ಭೂಕಂಪನದ ಅನುಭವ ಆಗುತ್ತಿದ್ದಂತೆ ಸ್ಥಳೀಯರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಈ ರೀತಿ ಸರಣಿ ರೂಪದಲ್ಲಿ ಭೂಕಂಪನದ ಅನುಭವ ಆಗಿತ್ತು. ಕಳೆದ 7 ದಿನಗಳಿಂದ ಭಾರಿ ಪ್ರಮಾಣ ಸದ್ದು ಭೂಮಿಯಲ್ಲಿ ಕಂಡು ಬಂದಿದ್ದು, ಸಿಂದಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಗಳು ಇದುವರೆಗೆ ಬಂದಿಲ್ಲ. ಅಧಿಕಾರಿಗಳು ಸ್ಥಿತಿಗತಿಯನ್ನು ಗಮನಿಸುತ್ತಿದ್ದು, ಜನರಿಗೆ ಶಾಂತವಾಗಿರಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚಿಸಿದ್ದಾರೆ.