Shivamoga: ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ಮಹಿಳೆ
ಮಗಳನ್ನು ಕೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ನರ್ಸ್ ಕ್ವಾರ್ಟಸ್ನಲ್ಲಿ ನಡೆದಿದೆ. ಪತಿ ರಾಮಣ್ಣ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ.
ಹತ್ಯೆಯಾದ ಬಾಲಕಿಯನ್ನು ಪೂರ್ವಿಕಾ ಎಂದು ಗುರುತಿಸಲಾಗಿದೆ. ಬಾಲಕಿ 6ನೇ ತರಗತಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ. ನೇಣಿಗೆ ಶರಣಾದ ಮಹಿಳೆಯನ್ನು ಶೃತಿ (38) ಎಂದು ಗುರುತಿಸಲಾಗಿದೆ. ಮಹಿಳೆ ಆತ್ಮಹತ್ಯೆಗೂ ಮುನ್ನ ಮಗಳಿಗೆ ಮಚ್ಚಿನಿಂದ ಹೊಡೆದು ಕೊಂದಿದ್ದಾಳೆ. ಬಳಿಕ ಆಕೆ ಪ್ಯಾನ್ಗೆ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೆಗ್ಗಾನ್ ಜಿಲ್ಲಾಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಆಗಿರುವ ರಾಮಣ್ಣ ಡ್ಯೂಟಿ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶ್ರುತಿ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.