SBI robbery: ಚಡಚಣ ಎಸ್‌ಬಿಐ ದರೋಡೆ: ಪಾಳುಬಿದ್ದ ಮನೆಯಲ್ಲಿ 41 ಲಕ್ಷ ರೂ, 6.5 ಕೆಜಿ ಚಿನ್ನ ಪತ್ತೆ!

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದಿದ್ದ ಭಾರೀ ದರೋಡೆ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ಹುಲಜಂತಿ ಗ್ರಾಮದ ಪಾಳು ಬಿದ್ದ ಮನೆಯೊಂದರ ಮೇಲ್ಚಾವಣಿಯಲ್ಲಿ 41 ಲಕ್ಷ ರೂ. ನಗದು ಮತ್ತು 6.5 ಚಿನ್ನಾಭರಣ ಇದ್ದ ಚೀಲ ಪತ್ತೆಯಾಗಿದೆ.  ಈ ಆಘಾತಕಾರಿ ದರೋಡೆಯಲ್ಲಿ ಒಟ್ಟು 1.5 ಕೋಟಿ ರೂ. ನಗದು ಮತ್ತು 20 ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಳುವಾಗಿತ್ತು.

ಮಂಗಳವೇಡ ಗ್ರಾಮಸ್ಥರು ಮನೆಯ ಮೇಲ್ಛಾವಣಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬ್ಯಾಗನ್ನು ವಶಪಡಿಸಿಕೊಂಡಿದ್ದಾರೆ. ದರೋಡೆಕೋರರು ಕೃತ್ಯದ ನಂತರ ಪರಾರಿಯಾಗುವಾಗ ಈ ಹಣ ಮತ್ತು ಚಿನ್ನವನ್ನು ಅಲ್ಲಿ ಬಚ್ಚಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ದರೋಡೆಕೋರರ ಪತ್ತೆಗಾಗಿ 8 ವಿಶೇಷ ತಂಡಗಳನ್ನು ರಚಿಸಿದ್ದಾರೆ.

ದರೋಡೆ ನಡೆದ ದಿನವಾದ ಸೆಪ್ಟೆಂಬರ್ 16ರಂದು ದರೋಡೆಕೋರರು ಬಳಸಿದ ಇಕೋ ವಾಹನ ಹುಲಜಂತಿ ಗ್ರಾಮದಲ್ಲೇ ಪತ್ತೆಯಾಗಿತ್ತು. ಈ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಾಗ ಸ್ಥಳೀಯರು ಪ್ರಶ್ನಿಸಿದಾಗ, ವಾಹನದಲ್ಲಿದ್ದ ಆರೋಪಿಗಳು ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಸ್ಥಳೀಯರಿಗೆ ಸಿಕ್ಕಿದ್ದ ಬ್ಯಾಗ್​​ನಲ್ಲಿಯೂ ಸ್ವಲ್ಪಚಿನ್ನಾಭರಣ ಹಾಗೂ 1.30 ಲಕ್ಷ ರೂ. ನಗದು ಸಿಕ್ಕಿತ್ತು. ದರೋಡೆಕೋರರು ಪರಾರಿಯಾಗುವ ವೇಳೆ ಚಿನ್ನಾಭರಣ ಮತ್ತು ನಗದು ಹೊಂದಿದ್ದ ಬ್ಯಾಗ್ ಅನ್ನು ಪಾಳು ಮನೆಯ ಮೇಲ್ಚಾವಣಿಯಲ್ಲಿ ಇಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.

ಸಪ್ಟೆಂಬರ್ 16 ರ ಸಂಜೆ ಚಡಚಣ ಪಟ್ಟಣದ ಎಸ್​ಬಿಐ ಬ್ಯಾಂಕ್ ದರೋಡೆಯಾಗಿತ್ತು. ಮ್ಯಾನೇಜರ್, ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್​ ಹಾಗೂ ಇದ್ದ ಕೆಲವು ಮಂದಿ ಗ್ರಾಹಕರ ಕೈಕಾಲು ಕಟ್ಟಿಹಾಕಿದ್ದ ದರೋಡೆಕೋರರು, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಬ್ಯಾಂಕ್ ಮ್ಯಾನೇಜರ್, ಸೆಕ್ಯೂರಿಟಿ ಗಾರ್ಡ್ ನಿರ್ಲಕ್ಷ್ಯ ಕೂಡ ದರೋಡೆಕೋರರಿಗೆ ನೆರವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದು, ಸಿಬ್ಬಂದಿ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಕಡೆ ಪರಾರಿಯಾಗಿದ್ದಾರೆ ಎನ್ನಲಾಗಿರುವ ದರೋಡೆಕೋರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Rakesh arundi

Leave a Reply

Your email address will not be published. Required fields are marked *