RSS: ಆರ್‌ಎಸ್‌ಎಸ್‌ ಈ ದೇಶಕ್ಕೆ, ಸಮಾಜಕ್ಕೆ ಮಾತ್ರವಲ್ಲ, ಬಿಜೆಪಿಗರಿಗೂ ಮಾರಕ: ಬಿ.ಕೆ ಹರಿಪ್ರಸಾದ್

ಆರ್‌ಎಸ್‌ಎಸ್‌ ಈ ದೇಶಕ್ಕೆ, ಸಮಾಜಕ್ಕೆ, ಸಂವಿಧಾನಕ್ಕೆ ಮಾತ್ರ ಮಾರಕವಲ್ಲ. ಸ್ವತಃ ಬಿಜೆಪಿ ನಾಯಕರಿಗೂ ಮಾರಕವಾಗಿದೆ. ಈ ಸತ್ಯವನ್ನು ನಾನು ಹೇಳುತ್ತಿರುವುದಲ್ಲ. ಬಿಜೆಪಿಗರೇ ಹೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಬಿಜೆಪಿ ಶಾಸಕ ಸುರೇಶ್‌ ಗೌಡ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, ಆರ್‌ಎಸ್‌ಎಸ್‌ ಎಂಬ ವಿಷಜಂತು ಬಿಜೆಪಿಗರನ್ನೂ ಸುಟ್ಟು ಬೂದಿ ಮಾಡಿದೆ. ಆರ್‌ಎಸ್‌ಎಸ್‌ನ ಸರ್ವಾಧಿಕಾರಿತನಕ್ಕೆ ಬಿಜೆಪಿಯ ಬಲಿಷ್ಠ ನಾಯಕರೂ ಬಲಿಯಾಗಿ ಬಿಲ ಸೇರಿದ್ದಾರೆ ಎಂದು ಹೇಳಿದ್ದಾರೆ.

ಈಗ ಬಿಜೆಪಿಯವರು ಸ್ಪರ್ಧೆಗೆ ಬಿದ್ದವರಂತೆ ಆರ್‌ಎಸ್‌ಎಸ್‌ ಪರವಾಗಿ ಸಮರ್ಥನೆಗೆ ಇಳಿದು ನಮ್ಮನ್ನು ನಿಂದಿಸುತ್ತಿದ್ದಾರೆ. ಬಿಜೆಪಿಯವರ ಈ ಸಮರ್ಥನಾ ಅಭಿಯಾನ ನಡೆಯುತ್ತಿರುವುದು ಆರ್‌ಎಸ್‌ಎಸ್‌ ಮೇಲಿನ ಭಕ್ತಿಯಿಂದಲ್ಲ ಭಯದಿಂದ. ಆರ್‌ಎಸ್‌ಎಸ್‌ ನ ಕಾಲಾಳುಗಳಂತೆ ವರ್ತಿಸದಿದ್ದರೆ ಬಿಜೆಪಿಯವರಿಗೆ ಭವಿಷ್ಯವೂ ಇಲ್ಲ, ಬದುಕೂ ಇಲ್ಲ ಎಂದಿದ್ದಾರೆ.

ಅಡ್ವಾಣಿಯವರನ್ನು ಮೂಲೆಗೆ ತಳ್ಳಿದ ಇದೇ ಆರ್‌ಎಸ್‌ಎಸ್‌ ಯಡಿಯೂರಪ್ಪನವರನ್ನೂ ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ, ಕೊನೆಗೂ ಎಳೆದು ಮೂಲೆಗೆ ಕೂರಿಸುವಲ್ಲಿ ಯಶಸ್ವಿಯಾಗಿತ್ತು. ಆರ್‌ಎಸ್‌ಎಸ್‌ ಗುಲಾಮಗಿರಿ ಮಾಡದಿದ್ದರೆ ತಮ್ಮ ಪೂಜ್ಯ ತಂದೆಯವರಿಗಾದ ಗತಿ ತಮಗೂ ಆಗಬಹುದೆಂಬ ಭಯ ವಿಜಯೇಂದ್ರರಿಗೆ ಇರಬಹುದೇನೋ ಎಂದು ಟೀಕಿಸಿದ್ದಾರೆ.

ಆರ್‌ಎಸ್‌ಎಸ್‌ನವರು ಕಡುಭ್ರಷ್ಟರು ಎಂಬ ಸತ್ಯವನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಸುರೇಶ್ ಗೌಡರೇ ಹೇಳಿದ್ದಾರೆ, ಇದಕ್ಕೆ ಉತ್ತರ ಹೇಳುವ ಧೈರ್ಯ ರಾಜ್ಯ ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಅವರಿಗಿದೆಯೇ? ಎಂದಿದ್ದಾರೆ.

ಸುರೇಶ್ ಗೌಡರ ಈ ಹೇಳಿಕೆ ಹೊರಬಂದ ನಂತರವೂ ಅವರ ವಿರುದ್ದ ಯಾವುದೆ ಕ್ರಮ ಜರುಗಿಸದೆ ಅವರಿಗೆ ಟಿಕೇಟ್ ನೀಡಿ ಅವಕಾಶ ಕಲ್ಪಿಸಲಾಗಿತ್ತು ಅಂದರೆ ಏನರ್ಥ? ಅವರಿಂದ ಆರ್‌ಎಸ್‌ಎಸ್‌ ಬಗೆಗಿನ ಇನ್ನಷ್ಟು ನಿಗೂಢ ಸತ್ಯಗಳು ಹೊರಬರದಿರಲಿ ಎಂಬ ಉದ್ದೇಶದಿಂದ ಅಲ್ಲವೇ? ಎಂದು ಹೇಳಿದ್ದಾರೆ.

ಯಡಿಯೂರಪ್ಪನವರು ಕಾಲಕಾಲಕ್ಕೆ ಆರ್‌ಎಸ್‌ಎಸ್‌ಗೆ ದುಬಾರಿ ಕಾಣಿಕೆ ನೀಡುತ್ತಾ ಕೇಶವ ಕೃಪೆಗೆ ಪಾತ್ರರಾಗಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುತ್ತಾ ಬಂದಿದ್ದರೇ? ಯಡಿಯೂರಪ್ಪನವರು ಹಾಗೂ ಸಂಘದವರು ಸೇರಿ ಭ್ರಷ್ಟಾಚಾರದ ಸಹಪಂಕ್ತಿ ಭೋಜನ ಮಾಡಿದ್ದಾರೆಯೇ? ನೋಂದಣಿಯಾಗದ ಸಂಘವು ತನ್ನ ಇತರ ಅಂಗಸಂಸ್ಥೆಗಳ ಮೂಲಕ ವಸೂಲಿ ದಂಧೆ ನಡೆಸುತ್ತದೆಯೇ? ಎಂದು ಕೇಳಿದ್ದಾರೆ.

ಯಡಿಯೂರಪ್ಪನವರಂತೆ ಇನ್ನೆಷ್ಟು ಜನ ಸಂಘಕ್ಕೆ ಅಕ್ರಮ ಹಣದ ಕಾಣಿಕೆ ಸಲ್ಲಿಸಿದ್ದಾರೆ? ಈ ಹಣ ಹವಾಲ ಮೂಲಕ ತಲುಪುತ್ತದೆಯೆ ಅಥವಾ ಆರ್‌ಟಿಜಿಎಸ್ ಮೂಲಕ ತಲುಪುತ್ತದೆಯೇ? ಸಂಘಪರಿವಾರಕ್ಕೆ ಎಷ್ಟು ಭೂಮಿಯನ್ನು ಅಕ್ರಮದ ಮೂಲಕ ದಯಪಾಲಿಸಲಾಗಿದೆ? ಆರ್‌ಎಸ್‌ಎಸ್‌ನ ಈ ಎಲ್ಲ ವ್ಯವಹಾರಗಳು ನಿಗೂಢವಾಗಿಯೂ, ರಹಸ್ಯವಾಗಿಯೂ ಇರುವುದೇಕೆ? ಎಂದು ಹರಿಪ್ರಸಾದ್ ಹೇಳಿದ್ದಾರೆ.

ಐಟಿ, ಈ.ಡಿ, ಸಿಬಿಐಗಳು ಈ ಅಕ್ರಮ, ಅವ್ಯವಹಾರಗಳತ್ತ ಗಮನಿಸುವುದಿಲ್ಲವೇ? ಅವುಗಳೂ ಸಂಘದ ಶಾಖೆಗಳಂತಾಗಿರುವಾಗ ಇದನ್ನು ನಿರೀಕ್ಷಿಸುವುದು ಮೂರ್ಖತನವೇ ಸರಿ. ಬಿಜೆಪಿಯ ಭ್ರಷ್ಟಾಚಾರದ ಹಣ ಸಂಘದ ಸೇವೆಗೆ ಸಲ್ಲಿಕೆಯಾಗಿರುವ ಇನ್ನೆಷ್ಟು ಪ್ರಕರಣಗಳಿವೆ ಎಂಬ ಸತ್ಯವನ್ನು ಬಯಲಿಗಿಡಬೇಕಿದೆ, ಎಷ್ಟೆಷ್ಟು ಸರಕಾರದ ಹಣ ‘ಸಂಘ ಸಮರ್ಪಣಮಸ್ತು ಆಗಿದೆ ಎಂಬುದನ್ನು ತಿಳಿಯಬೇಕಿದೆ, ಬಿಜೆಪಿ ಹಾಗೂ ಸಂಘದ ನಡುವಿನ ಅಕ್ರಮ ಹಾಗೂ ಅನೈತಿಕ ವ್ಯವಹಾರಗಳನ್ನು ಹೊರಗೆಳೆಯಬೇಕಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

Rakesh arundi

Leave a Reply

Your email address will not be published. Required fields are marked *