Road Accident: ಪಾದಯಾತ್ರೆ ಹೋಗುತ್ತಿದ್ದವರ ಮೇಲೆ ಹರಿದ ಬಸ್, ಮೂವರ ಸಾವು

ಕೊಪ್ಪಳ‌ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು ಮೂವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.

ಅನ್ನಪೂರ್ಣ (40), ಪ್ರಕಾಶ್ (25), ಶರಣಪ್ಪ (19) ಎಂಬ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರಾಗಿದ್ದು, ಹುಲಿಗೆಮ್ಮ ದೇವಾಲಯದ ಪಾದಯಾತ್ರೆಗೆ ತೆರಳುತ್ತಿದ್ದರು. ಒಟ್ಟು 7 ಜನ ಪಾದಯಾತ್ರೆಗೆ ಹೊರಟ್ಟಿದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದು, ನಾಲ್ವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಕೊಂಚ ದೂರ ನಡೆದಿದ್ದರೆ ಭಕ್ತರು ದೇವಾಲಯ ತಲುಪುತ್ತಿದ್ದರು. ಅಷ್ಟರಲ್ಲಿ ಸಿಂದಗಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ನಿಯಂತ್ರಣ ತಪ್ಪಿ ಭಕ್ತರ ಮೇಲೆ ಹರಿದ ಪರಿಣಾಮ ಈ ಘಟನೆ ನಡೆದಿದೆ.

ಈ ಪ್ರಕರಣವು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Rakesh arundi

Leave a Reply

Your email address will not be published. Required fields are marked *