Bangalore: ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆ: ಅಕ್ಟೋಬರ್ 13ರ ತನಕ ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಗುಡುಗು ಸಹಿತ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕರು ಪರದಾಡುವಂತಾಗಿದೆ. ರಾತ್ರಿ ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಗುಂಡಿಬಿದ್ದ ರಸ್ತೆಗಳಲ್ಲಿ ನೀರು ಕಟ್ಟಿಕೊಂಡಿದ್ದು, ಚಾಲಕರನ್ನು ರಸ್ತೆಯಲ್ಲಿ ನಿಲ್ಲಿಸಿಬಿಟ್ಟವು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯಿಂದಾಗಿ ಹಲವು ಕಡೆ ನದಿಯಂತಾಗಿದೆ. ರಸ್ತೆಯಲ್ಲಿ 2 ಅಡಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು. ಶಾಂತಿನಗರದ ರಿಚ್ಮಂಡ್‌ಟೌನ್‌ನಲ್ಲೂ ವರುಣಾರ್ಭಟದಿಂದಾಗಿ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ವಿಕ್ಟೋರಿಯಾ ರಸ್ತೆಯಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಪರದಾಡುವಂತಾಯಿತು. ಹೆಚ್‌ಎಎಲ್‌ನ ರಸ್ತೆಯ ವಿಕ್ಟೋರಿಯಾ ರೋಡ್‌ನಲ್ಲಿ ಮಳೆಯಿಂದ ಅವಾಂತರವೇ ಸೃಷ್ಟಿಯಾಗಿತ್ತು. ರಸ್ತೆ ತುಂಬ ನೀರು ತುಂಬಿಕೊಂಡಿದ್ದರಿಂದ ವಾಹನಗಳು ಚಲಿಸಲಾಗದೆ ಕೆಟ್ಟು ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.
ಭಾರಿ ಮಳೆಯಿಂದಾಗಿ ಬೆಂಗಳೂರು ಹೃದಯಭಾಗ ಕೆಆರ್ ಮಾರ್ಕೆಟ್‌ನ ರಸ್ತೆ ಜಲಾವೃತವಾಯಿತು. ಹಳ್ಳಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಪ್ರತಿಬಾರಿಯಂತೆ ಈ ಬಾರಿಯೂ ಮಾನ್ಯತಾ ಟೆಕ್‌ಪಾರ್ಕ್‌ನ ರಸ್ತೆ ಮಳೆಗೆ ಮುಳುಗಿಹೋಗಿತ್ತು. ಮತ್ತೊಂದೆಡೆ ನಾಗರಬಾವಿಯಲ್ಲಿ ಭಾರಿ ಮಳೆಯಿಂದಾಗಿ ಮರವೊಂದು ರಸ್ತೆ ಮಧ್ಯೆ ಬುಡಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಹಲವೆಡೆ ಚರಂಡಿಗಳು ತೆರೆದುಕೊಂಡಿದ್ದು, ಸವಾರರಿಗೆ ಅಪಾಯವನ್ನುಂಟು ಮಾಡುತ್ತಿವೆ. ಇದು ಕೇವಲ ಒಂದೆರಡು ರಸ್ತೆಗಳ ಕಥೆಯಲ್ಲ, ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ಇದೇ ರೀತಿಯ ಅವ್ಯವಸ್ಥೆ ಸೃಷ್ಟಿಯಾಗಿದೆ.
ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಕ್ಟೋಬರ್ 13 ರ ವರೆಗೂ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ.