Priyank Kharge: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಬ್ಯಾನ್ : ಸಿಎಂಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ
ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈ ಪತ್ರವನ್ನು ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಪತ್ರದಲ್ಲಿ, ‘ಜನರಲ್ಲಿ ದ್ವೇಷವನ್ನು ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ, ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲ ತತ್ವಗಳ ಮೇಲೆ ಸ್ಥಾಪಿತವಾದ ನಮ್ಮ ಸಂವಿಧಾನವು ಅಂತಹ ಅಂಶಗಳನ್ನು ನಿಗ್ರಹಿಸಲು ಮತ್ತು ರಾಷ್ಟ್ರದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಲು ನಮಗೆ ಅಧಿಕಾರವನ್ನು ನೀಡುತ್ತದೆ’ ಎಂದು ಸಚಿವರು ಬರೆದಿದ್ದಾರೆ.
‘ಪೊಲೀಸರ ಅನುಮತಿ ಪಡೆಯದೆ, ಕೋಲುಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ. ಇದು ಮಕ್ಕಳು ಮತ್ತು ಯುವಜನರ ಮೇಲೆ ಹಾನಿಕಾರಕ ಮಾನಸಿಕ ಪರಿಣಾಮ ಬೀರಬಹುದು. ದೇಶದ ಮಕ್ಕಳು, ಯುವಕರು, ಸಾರ್ವಜನಿಕರು ಮತ್ತು ಒಟ್ಟಾರೆಯಾಗಿ ಸಮಾಜದ ಯೋಗಕ್ಷೇಮದ ಹಿತದೃಷ್ಟಿಯಿಂದ, ‘ಶಾಖೆ’, ‘ಸಂಘಿಕ್’ ಅಥವಾ ‘ಬೈಠಕ್’ ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ’ ಎಂದಿದ್ದಾರೆ.
‘ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು, ಸಾರ್ವಜನಿಕ ಆಟದ ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆ ಅಡಿಯಲ್ಲಿರುವ ದೇವಾಲಯಗಳು, ಪುರಾತತ್ವ ಇಲಾಖೆ ಅಡಿಯಲ್ಲಿರುವ ಸ್ಥಳಗಳು ಮತ್ತು ಯಾವುದೇ ಇತರ ಸರ್ಕಾರಿ ಆವರಣಗಳಲ್ಲಿ ಆರ್‌ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಬೇಕು’ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನಲ್ಲಿ 100 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಯುತ್ತಿದೆ. ಬಿಜೆಪಿ ನಾಯಕರು ಈ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ.
‘ಸಂವಿಧಾನವು ನಾಗರಿಕರು ಮತ್ತು ರಾಜ್ಯ ಇಬ್ಬರಿಗೂ ವಿಭಜನೆಯನ್ನು ಹರಡುವ ಶಕ್ತಿಗಳ ವಿರುದ್ಧ ಕಾರ್ಯನಿರ್ವಹಿಸಲು ಅಧಿಕಾರ ನೀಡುತ್ತದೆ. ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸುತ್ತದೆ’ ಎಂದು ಅವರು ಒತ್ತಿ ಹೇಳಿದರು.