Notice shops; ಬಾಡಿಗೆ ಪಾವತಿಸದ 29 ಮಳಿಗೆಗೆ ನೋಟಿಸ್
ತಾಲೂಕು ಪಂಚಾಯಿತಿ ವ್ಯಾಪ್ತಿಯ 29 ಮಳಿಗೆಗಳ ಮಾಲೀಕರು ಬಾಡಿಗೆ ಪಾವತಿಸದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಹಾಗೂ ಹರಾಜು ಅವಧಿ ಮುಗಿದ ಕಾರಣ ಶುಕ್ರವಾರ ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ನೇತೃತ್ವದಲ್ಲಿ ತಾಪಂ ಇಒ ಕೆಂಚಪ್ಪ ಸ್ಥಳಕ್ಕೆ ಧಾವಿಸಿ ಮಳಿಗೆಗಳಿಗೆ ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಿದರು.
ಬಿದರಕೆರೆಯ ರಸ್ತೆಯ ಭರತ್ ಗ್ಯಾಸ್ ಕಚೇರಿಯಿಂದ ಅರಣ್ಯ ಇಲಾಖೆಯವರೆಗೂ ಒಟ್ಟು 29 ಮಳಿಗೆಗಳಿದ್ದು 2020ರಲ್ಲಿ ಮಳಿಗೆಗಳ ಕರಾರಿನಂತೆ ನಾಲ್ಕು ವರ್ಷ 11 ತಿಂಗಳಿಗೆ ಮಳಿಗೆಗಳ ಬಾಡಿಗೆ ಕರಾರು ಮಾಡಿಕೊಳ್ಳಲಾಗಿತ್ತು. ಆ ಕರಾರು 2025ರ ಜೂನ್ 30ಕ್ಕೆ ಮುಕ್ತಾಯಗೊಂಡಿದೆ.
ಈ ಎಲ್ಲ ಮಾಲೀಕರು ಸರಿಯಾದ ಸಮಯಕ್ಕೆ ಬಾಡಿಗೆ ನೀಡದೆ ವಿಳಂಬ ಮಾಡಿದ್ದಾರೆ. ಅಲ್ಲದೇ 20 ಲಕ್ಷ ರೂ. ಬಾಕಿ ಉಳಿಸಿಕೊಂಡು ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿದ್ದಾರೆ. ಹೀಗಾಗಿ ಬಾಡಿಗೆ ಹಣ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದರೂ ಜಮೆ ಮಾಡಿಲ್ಲ. ಈಗ ನೋಟಿಸ್ ನೀಡಿ 7 ದಿನಗಳ ಗಡುವು ನೀಡಲಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ತಿಳಿಸಿದರು.
ಮಾಲೀಕರಿಗೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಇದುವರೆಗೂ ತೆರವುಗೊಳಿಸಿಲ್ಲ. ಸೆ.25ರ ಒಳಗಾಗಿ ಬಾಡಿಗೆ ಕಟ್ಟಿ ಮಾಲೀಕರು ತಮ್ಮ ಸ್ವತ್ತುಗಳನ್ನು ಎತ್ತಂಗಡಿ ಮಾಡಬೇಕು ಎಂದು ಪ್ರತಿ ಮಳಿಗೆಯ ಮುಂದೆ ನೋಟಿಸ್ ಅಂಟಿಸಲಾಗಿದೆ ಎಂದರು. ಇಷ್ಟು ವರ್ಷ ಇದ್ದವರು ಬಾಡಿಗೆ ಕಟ್ಟಿ ಮತ್ತೆ ಮಳಿಗೆ ಬೇಕಾದರೆ ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಬಾಕಿ 20 ಲಕ್ಷ ರೂ. ವಸೂಲಿ ಆದ ಮೇಲೆಯೇ ಮಳಿಗೆ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ತಾಪಂ ಇಒ ಕೆಂಚಪ್ಪ ಮಾತನಾಡಿ ಸರ್ಕಾರದ ಅನುದಾನದ ಅಡಿಯಲ್ಲಿ ನಿರ್ಮಾಣವಾದ ಮಳಿಗೆಗಳಿಗೆ ಬಾಡಿಗೆ ಬಾಕಿ ಮೊತ್ತ ಪಾವತಿಸದ ಕಾರಣ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಅವಧಿ ಮುಗಿದ ಕಾರಣ ನಿಯಮಗಳ ಅನುಸಾರ ಹೊಸದಾಗಿ ಹರಾಜು ಕೂಗಲು ಸಮಯ ನಿಗದಿ ಪಡಿಸಲಾಗುವುದು ಎಂದರು. ಮಳಿಗೆಗಳ ರಿಪೇರಿ, ಸುಣ್ಣ ಬಣ್ಣ ಮಾಡಿಸುವ ಕಾರ್ಯವಿದೆ. ಸೆ.25ರ ಒಳಗಾಗಿ ಮಾಲೀಕರು ಮಳಿಗೆಗಳನ್ನು ಖಾಲಿ ಮಾಡಬೇಕು. ಇಲ್ಲವಾದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.