ಜಾತಿ ಸಮೀಕ್ಷೆ ಮುಂದೂಡಿಕೆ ಇಲ್ಲ: ಸಿಎಂ ಸಿದ್ದರಾಮಯ್ಯ
ಕರ್ನಾಟಕ ಸರ್ಕಾರವು ಈಗಾಗಲೇ ಪ್ರಕಟಿಸಿರುವಂತೆಯೇ ಸೆ.22ರಿಂದಲೇ ಆರ್ಥಿಕ, ಸಾಮಾಜಿಕ ಸಮೀಕ್ಷೆ ಆರಂಭವಾಗಲಿದ್ದು, ಸಮೀಕ್ಷೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಾತಿ ಸಮೀಕ್ಷೆಯನ್ನು ಮುಂದೂಡುವುದಿಲ್ಲ, ಬಿಜೆಪಿಯವರು ರಾಜಕೀಯವಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂಗಳ ವಿರುದ್ಧವಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜಾತಿಗಣತಿ ಸಂಬಂಧ ಸಚಿವರ ಒತ್ತಡಗಳಿಗೆ ಮಣಿಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಸೆ. 22ರಿಂದ ಕೆಲ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸಮೀಕ್ಷೆ ಮುಂದುವರಿಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸಮೀಕ್ಷೆಗೆ ಪರಿಗಣಿಸಿದ ಸರ್ಕಾರದ ಕ್ರಮಕ್ಕೆ ವಿವಿಧ ಜಾತಿ ಸಮುದಾಯಗಳು, ಸಂಘಟನೆಗಳು ಹಾಗೂ ಸರ್ಕಾರದ ಸಚಿವರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಸಮುದಾಯಗಳನ್ನು ಒಡೆಯುವ ಹುನ್ನಾರ ನಡೆಸಿದೆ ಎಂಬ ಟೀಕೆಗಳೂ ಕೇಳಿ ಬಂದಿದ್ದವು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೊಸ ಜಾತಿಗಳನ್ನು ಸಮೀಕ್ಷೆಯಿಂದ ಕೈ ಬಿಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.