Madhya Pradesh: ಸರ್ಕಾರಿ ಕೆಲಸ ಕಳೆದುಕೊಳ್ಳುವ ಭಯದಿಂದ 3 ದಿನಗಳ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದ ದಂಪತಿ
ಸರ್ಕಾರಿ ಕೆಲಸ ಉಳಿಸಿಕೊಳ್ಳಲು ದಂಪತಿಗಳು ತಮ್ಮ 3 ದಿನದ ನವಜಾತ ಶಿಶುವನ್ನು ಕಾಡಿನಲ್ಲಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ.
ಮೂರು ದಿನಗಳ ನವಜಾತ ಶಿಶುವನ್ನು ಪೋಷಕರು ಕಾಡಿನ ನಡುವೆ ಕಲ್ಲಿನ ಕೆಳಗೆ ಇಟ್ಟು ಹೋಗಿದ್ದಾರೆ. ನಂತರ ಮಗು ಜೋರಾಗಿ ಅಳಲು ಶುರು ಮಾಡಿದೆ. ಅಳುವಿನ ಸದ್ದು ಕೇಳಿ ಸುತ್ತಮುತ್ತಲಿದ್ದ ನಿವಾಸಿಗಳು ಎಚ್ಚರಗೊಂಡಿದ್ದಾರೆ. ಮೊದಲು ಭಯಗೊಂಡರೂ, ನಂತರ ಏನಿರಬಹುದು ಎಂದು ಹತ್ತಿರ ಹೋಗಿ ನೋಡಿದಾಗ ಮಗು ಇರುವುದು ಗೊತ್ತಾಗಿದೆ. ಕೂಡಲೇ ಮಗುವನ್ನು ರಕ್ಷಿಸಿದ್ದಾರೆ.
ಮಧ್ಯಪ್ರದೇಶದಲ್ಲಿ 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸರ್ಕಾರಿ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಈಗಾಗಲೇ ಮೂವರು ಮಕ್ಕಳಿದ್ದು, ಇನ್ನೊಂದು ಮಗು ಆದರೆ ತಾವು ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ 3 ದಿನದ ಕಂದಮ್ಮನನ್ನು ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದರು.
ಸರ್ಕಾರಿ ಶಿಕ್ಷಕರಾದ ತಂದೆ ಬಬ್ಬು ದಾಂಡೋಲಿಯಾ ಮತ್ತು ತಾಯಿ ರಾಜಕುಮಾರಿ ದಾಂಡೋಲಿಯಾ ತಮ್ಮ ಮಗುವನ್ನು ನಾಲ್ಕನೇ ಮಗುವಾಗಿದ್ದರಿಂದ ತ್ಯಜಿಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಉದ್ಯೋಗವನ್ನು ನಿರ್ಬಂಧಿಸುವ ಸರ್ಕಾರಿ ನಿಯಮಗಳ ಅಡಿಯಲ್ಲಿ ಕೆಲಸ ಕಳೆದುಕೊಳ್ಳುವ ಭಯಭೀತರಾದ ದಂಪತಿಗಳು ಈಗಾಗಲೇ ಮೂರು ಮಕ್ಕಳನ್ನು ಹೊಂದಿದ್ದರಿಂದ ಗರ್ಭಧಾರಣೆಯನ್ನು ರಹಸ್ಯವಾಗಿಟ್ಟರು. ನಂತರ ಮಗು ಜನಿಸಿದ ಮೇಲೆ ಯಾರಿಗು ತಿಳಿಯಾದ ಹಾಗೆ ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.