Bengaluru: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ಕೊಂದು ತಾನು ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಗುರುವಾರ ರಾತ್ರಿ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಮಕ್ಕಳನ್ನು 1 ವರ್ಷದ ಭುವನ್ ಹಾಗೂ 4 ವರ್ಷದ ಬೃಂದಾ ಎಂದು ಗುರುತಿಸಲಾಗಿದೆ. ವಿಜಯಲಕ್ಷ್ಮೀಯ ಗಂಡ ರಮೇಶ್ ಖಾಸಗಿ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ವಿಜಯಲಕ್ಷ್ಮಿ ತಂಗಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇವರು ಮೂಲತಃ ರಾಯಚೂರು ಜಿಲ್ಲೆಯವರು ಎಂದು ತಿಳಿದು ಬಂದಿದೆ.
ತಾನು ಮತ್ತೊಂದು ಮದುವೆಯಾಗಿದ್ದು, ಡೈವೋರ್ಸ್ ಕೊಡುವಂತೆ ಪತ್ನಿಗೆ ಪತಿ ರಮೇಶ್ ಬೆದರಿಕೆ ಹಾಕುತ್ತಿದ್ದ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ಪದೇ ಪದೆ ಕುಟುಂಬದಲ್ಲಿ ಜಗಳ ಆಗುತ್ತಿತ್ತು. ಈ ವಿಚಾರ ವಿಜಯಲಕ್ಷ್ಮಿ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು ಎನ್ನಲಾಗುತ್ತಿದೆ. ಇದರಿಂದಲೇ ನೊಂದು ತನ್ನ ಮಕ್ಕಳನ್ನು ಕೊಂದು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.