Ballari: 200ಕ್ಕೂ ಹೆಚ್ಚು ಬಾಡಿಗೆ ಕಾರುಗಳನ್ನು ಅಡವಿಟ್ಟು ಹಣಪಡೆದು ಎಸ್ಕೇಪ್ ಆದ ಭೂಪ!
ಖತರ್ನಾಕ್ ಕಿಲಾಡಿಯೊಬ್ಬ ತಾನು ಬಾಡಿಗೆ ಪಡೆದ 200 ಕ್ಕೂ ಹೆಚ್ಚು ಕಾರುಗಳನ್ನು ಗಿರವಿಯಿಟ್ಟು ಹಣ ಪಡೆದು ಎಸ್ಕೇಪ್ ಆಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಎಂ.ಡಿ ಜಹೀದ್ ಭಾಷಾ ಅಲಿಯಾಸ್ ಸೋನೊ 200ಕ್ಕೂ ಹೆಚ್ಚು ಜನರಿಗೆ ವಂಚಿಸಿ ಪರಾರಿಯಾಗಿದ್ದಾನೆ. ಎರಡು ಮೂರು ತಿಂಗಳು ಕಾರಿಗೆ ಬಾಡಿಗೆ ಕೊಟ್ಟು ಬಳಿಕ ಕೈ ಕೊಟ್ಟಿದ್ದಾನೆ. ಆರು ತಿಂಗಳಿಂದ ಸತತವಾಗಿ ಬಳ್ಳಾರಿಯ ತನ್ನ ಸ್ನೇಹಿತರ ಮೂಲಕ ಕಾರುಗಳನ್ನ ಇತರರಿಂದ ಬಾಡಿಗೆ ಪಡೆದಿದ್ದ ಎಂ.ಡಿ ಜಹೀದ್ ಪಾಷಾ ಸಿಂಧನೂರಿನಲ್ಲಿ ಕಾರುಗಳನ್ನ ಗಿರವಿ ಇಟ್ಟು ಹಣಪಡೆದು ಎಸ್ಕೇಪ್ ಆಗಿದ್ದಾನೆ.
ಬಳ್ಳಾರಿಯ ತನ್ನ ಸ್ನೇಹಿತರ ಮೂಲಕವೇ ಕಾರುಗಳ ಮಾಹಿತಿಯನ್ನ ಸೋನು ಪಡೆದುಕೊಳ್ಳುತ್ತಿದ್ದ. ತನ್ನ ಚಾಣಾಕ್ಷ ಬುದ್ಧಿ ಉಪಯೋಗಿಸಿ, ಮಾಲಕರ ಜೊತೆ ನೇರ ಸಂಪರ್ಕವಿಲ್ಲದೆ ವ್ಯವಹಾರ ಮಾಡುತ್ತಾ ಬಂದಿದ್ದ. ಬಾಡಿಗೆ ಪಡೆದಿದ್ದ ಕಾರುಗಳಿಗೆ ಒಪ್ಪಂದವನ್ನೂ ಈತ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಈತ ಸರಿಯಾಗಿ ಬಾಡಿಗೆ ಹಣ ನೀಡುತ್ತಿದ್ದ ಕಾರಣ ಕಾರುಗಳ ಮಾಲಕರೂ ಈತನನ್ನ ನಂಬಿದ್ದರು.
ತಿಂಗಳು ತಿಂಗಳು ಬಾಡಿಗೆ ಹಣ ಬರುತ್ತೆ ಎಂದು ಸೋನುಗೆ ಕಾರುಗಳನ್ನ ಬಾಡಿಗೆಗೆ ಕೊಟ್ಟಿದ್ದ ನೂರಾರು ಜನ ಮಾಲಕರೀಗ ಕಂಗಾಲಾಗಿದ್ದಾರೆ. ಸದ್ಯ ಬಾಡಿಗೆಯೂ ಇಲ್ಲ, ಕಾರುಗಳೂ ಇಲ್ಲದ ಸ್ಥಿಯಲ್ಲಿದ್ದಾರೆ. ವಂಚನೆಗೆ ಒಳಗಾದವರು ಸದ್ಯ ಬಳ್ಳಾರಿ ಬ್ರೂಸ್ ಪೇಟೆ ಪೊಲೀಸರ ಮೊರೆ ಹೋಗಿದ್ದು, ನಮಗೆ ನ್ಯಾಯ ಕೊಡಿಸಿ. ನಮ್ಮ ಕಾರುಗಳನ್ನ ಮರಳಿ ನಮಗೆ ಕೊಡಿಸಿ ಎಂದು ಅಂಗಲಾಚಿದ್ದಾರೆ.