Bengaluru: ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ವಲಸೆ ಕಾರ್ಮಿಕರು ಸಾವು

ನಗರದ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ಧಾರ್ಥ ಕಾಲೋನಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುತ್ತಿದ್ದ ವೇಳೆ ಅಪಾರ ಪ್ರಮಾಣದ ಮಣ್ಣು ಕುಸಿದು ಜಾರ್ಖಂಡ್ ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವಿಗೀಡಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತರನ್ನು ಲಾಲ್ ಮುದ್ದೀನ್ (33) ಮತ್ತು ರಜಾವುದ್ದೀನ್ (32) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸೈಫುಲ್ಲಾ (28) ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಿದ್ಧಾರ್ಥ ಕಾಲೋನಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಡಿಪಾಯಕ್ಕಾಗಿ 20 ಅಡಿ ಆಳದ ಗುಂಡಿ ತೆಗೆಯುತ್ತಿದ್ದಾಗ ಏಕಾಎಕಿ ಅಪಾರ ಪ್ರಮಾಣದ ಮಣ್ಣು ಕಾರ್ಮಿಕನ ಮೇಲೆ ಕುಸಿದಿದೆ. ಮಣ್ಣಿನ ಅಡಿ ಸಿಲುಕ್ಕಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಂಗಳವಾರ ಸಂಜೆ 7.30ರ ಸುಮಾರಿಗೆ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿದಿದೆ ಮತ್ತು ಕೆಲಸ ಮಾಡುತ್ತಿದ್ದ ಕೆಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಮಗೆ ದೂರು ಬಂತು. ನಾವು ಬಂದು ಪರಿಶೀಲಿಸಿದಾಗ, ಮೂವರು ಸಿಲುಕಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ) ಸಾರಾ ಫಾತಿಮಾ ಹೇಳಿದರು.

ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಗುತ್ತಿಗೆದಾರರು ಮತ್ತು ಕಟ್ಟಡ ಮಾಲೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

Rakesh arundi

Leave a Reply

Your email address will not be published. Required fields are marked *