Meri-saheli: ಮಹಿಳಾ ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆಯಿಂದ ‘ಮೇರಿ ಸಹೇಲಿ’ ಜಾರಿ
ರೈಲಿನಲ್ಲಿ ರಾತ್ರಿ ವೇಳೆ ಒಂಟಿಯಾಗಿ ಪ್ರಯಾಣಿಸುವಾಗ ಆಗುವ ಭಯದ ವಾತಾವರಣ ಹಾಗೂ ರೈಲು ಹತ್ತುವಾಗ ಮತ್ತು ಇಳಿಯುವಾಗ ಹಾಗೆಯೇ ಅಪರಿಚಿತರ ನಡುವೇ ಕುಳಿತುಕೊಂಡು ಪ್ರಯಾಣಿಸುವಾಗ ಆಗುವ ಆತಂಕವನ್ನು ದೂರ ಮಾಡುವ ಸಲುವಾಗಿ ‘ಮೇರಿ ಸಹೇಲಿ’ ಎನ್ನುವ ಹೊಸ ಯೋಜನೆಯನ್ನು ರೈಲ್ವೆ ಇಲಾಖೆ ಜಾರಿಗೊಳಿಸಿದೆ.
ಮಹಿಳೆಯರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು 2020 ರ ನವೆಂಬರ್ ತಿಂಗಳಿನಲ್ಲಿ ಭಾರತೀಯ ರೈಲ್ವೆ ಇಲಾಖೆ ‘ಮೇರಿ ಸಹೇಲಿ’ ಯೋಜನೆ ಆರಂಭಿಸಿದ್ದು, ಪ್ರಸ್ತುತ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ಒಂಟಿ ಮಹಿಳೆಯರ ಆಪ್ತ ಗೆಳತಿಯಾಗಿ ಅಭಯ ನೀಡುತ್ತಿದೆ.
2025ರ ಜನವರಿಯಿಂದ ಈವರೆಗೆ 4,860 ರೈಲುಗಳಲ್ಲಿ ಕಾರ್ಯಾಚರಣೆ ಕೈಗೊಂಡ ನೈರುತ್ಯ ರೈಲ್ವೆ ವಲಯ ರೈಲ್ವೆ ಭದ್ರತಾ ಪಡೆಯ 25 ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಒಟ್ಟು 10 ಮೇರಿ ಸಹೇಲಿ ತಂಡಗಳು ಕಾರ್ಯನಿರ್ವವಹಿಸುತ್ತಿದ್ದಾರೆ. ಈವರೆಗೆ ಒಟ್ಟು 2,08,869 ಒಂಟಿ ಮಹಿಳೆಯರಿಗೆ ಈ ತಂಡ ನೆರವು ನೀಡಿದೆ. ರೈಲು ಪ್ರಯಾಣದ ವೇಳೆ ಮಹಿಳೆಯರು 139 ಸಹಾಯವಾಣಿ ಆಥವಾ ರೈಲ್ ಮದತ್ ಅಪ್ಲಿಕೇಷನ್ ಮೂಲಕ ಮೇರಿ ಸಹೇಲಿ ತಂಡದ ಸಹಾಯ ಪಡೆದುಕೊಳ್ಳುತ್ತಿದ್ದಾರೆ.
ಬುಕಿಂಗ್ ಮಾಡಿದ ಪ್ರಯಾಣಿಕರ ಮಾಹಿತಿಯನ್ನುಇಲಾಖೆಯಿಂದ ಪಡೆದುಕೊಂಡ ಸಿಬ್ಬಂದಿಗಳು ಆ ಭೋಗಿಗೆ ಹೋಗಿ ಮಹಿಳೆಯರಿಗೆ ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ. ಪ್ರತಿದಿನ ಒಟ್ಟು 13 ಸಾವಿರ ಒಂಟಿ ಪ್ರಯಾಣಿಕರಿಗೆ ಭದ್ರತೆ ಒದಗಿಸುತ್ತಿದೆ. ಈ ತಂಡ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ವಿವರಗಳನ್ನು ಮುಂಚಿತವಾಗಿ ಸಂಗ್ರಹಿಸಿ, ಬೋಗಿ ಏರುವುದರಿಂದ ಇಳಿಯುವವರೆಗೂ ಸಂಪರ್ಕದಲ್ಲಿದ್ದು ಅಗತ್ಯ ನೆರವು ಒದಗಿಸುತ್ತದೆ.