Fire-Accident: ಮಡಿಕೇರಿಯ ಹರಿಮಂದಿರ ವಸತಿ ಶಾಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌, ಬಾಲಕ ಸಜೀವ ದಹನ

ಹರಿಮಂದಿರ ವಸತಿ ಶಾಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿದ್ದು, ಓರ್ವ ವಿದ್ಯಾರ್ಥಿ ಸಜೀವ ದಹನವಾಗಿರುವ ಘಟನೆ ಮಡಿಕೇರಿಯ ಕಾಟಕೇರಿ ಗ್ರಾಮದಲ್ಲಿ ನಡೆದ ಘಟನೆ.

ಭಾಗಮಂಡಲ ಸಮೀಪದ ಚೆಟ್ಟಿಮಾನಿ ಗ್ರಾಮದ ನಿವಾಸಿ ಪುಷ್ಪಕ್ ಮೃತ ವಿದ್ಯಾರ್ಥಿ. ಪುಷ್ಪಕ್ ಮಡಿಕೇರಿ ತಾಲೂಕಿನ ಕಾಟಗೇರಿ ಹರಿಮಂದಿರ ವಸತಿ ಶಾಲೆಯಲ್ಲಿ ಎರಡನೇ ವ್ಯಾಸಂಗ ಮಾಡುತ್ತಿದ್ದ. ಇಂದು ಬೆಳಗ್ಗೆ ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾನೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ವಸತಿ ಗೃಹದಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಶಾಲೆಯ ವಸತಿ ಗೃಹದಲ್ಲಿ ಒಟ್ಟು 53 ಮಕ್ಕಳಿದ್ದು, ಗ್ರಾಮಸ್ಥರು ಎಲ್ಲಾ ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ವಿದ್ಯಾರ್ಥಿ ಪುಷ್ಪಕ್ ಮಾತ್ರ ದಟ್ಟ ಹೊಗೆ ಅವರಿಸಿದ ಹಿನ್ನಲೆಯಲ್ಲಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಹೋಗಿದ್ದ ಎನ್ನಲಾಗಿದೆ. ಸಿಬ್ಬಂದಿ ಮಕ್ಕಳ ಎಣಿಕೆ ಮಾಡುವ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿ ಕಾಣೆಯಾಗಿದ್ದಾನೆ ಎಂದು ಕೊಠಡಿ ಒಳಗೆ ನುಗ್ಗಿ ಹುಡುಕಾಟ ನಡೆಸುವ ಸಂದರ್ಭದಲ್ಲಿ ಪುಷ್ಪಕ್ ಜೀವಂತ ದಹನವಾಗಿರುವುದು ಗೊತ್ತಾಗಿದೆ.

ಮನೆಯನ್ನೇ ವಸತಿ ಶಾಲೆಯಾಗಿ ಪರಿವರ್ಥನೆ ಮಾಡಿಲಾಗಿತ್ತು. ಇಂಡೆಕ್ಸ್‌ ಕ್ವಾಲಿಟಿ ಫೌಂಡೇಷನ್‌ ಶಾಲೆಯ ನಿರ್ವಹಣೆ ಮಾಡುತ್ತಿದ್ದು, ಬಿಪಿಎಲ್‌ ಕಾರ್ಡ್‌ ಹೊಂದಿರುವ ಮಕ್ಕಳಿಗೆ ಏಳನೇ ತರಗತಿವರೆಗೂ ಉಚಿತ ಶಿಕ್ಷಣ ನೀಡಲಾಗುತಿತ್ತು. ಶಾಲೆಯಲ್ಲಿ 100 ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ದಸರಾ ರಜೆ ಹಿನ್ನೆಲೆ ಅನೇಕ ಮಕ್ಕಳು ರಜೆಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

ವಸತಿ ಶಾಲೆಯು ಮರದ ಮನೆ, ಹಳೇ ಮನೆಯಾದ್ದರಿಂದ ಬೆಂಕಿ ಬೇಗನೆ ಎಲ್ಲೇಡೆ ಹರಡಿದೆ. ಘಟನೆಯಲ್ಲಿ ಮಂಚ, ಪುಸ್ತಕ , ಬಟ್ಟೆ ಬರೆ ಎಲ್ಲಾ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸ್‌‍ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ್, ಆಗ್ನಿ ಶಾಮಕ ಅಧಿಕಾರಿ ನಾಗರಾಜ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Rakesh arundi

Leave a Reply

Your email address will not be published. Required fields are marked *