Lottery Prize: ಲಾಟರಿ ಬಹುಮಾನ: 3.71 ಲಕ್ಷ ರೂ ಕಳೆದುಕೊಂಡ ವ್ಯಕ್ತಿ
ಕೋಟ್ಯಾಧಿಪತಿ ಆಗ್ಬೇಕು ಅಂತ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲೂ ಕಷ್ಟಾನೆ ಪಡದೆ ನಿಮಗೆ ಲಕ್ಷಗಟ್ಟಲೆ ಗಣ ಸಿಗುತ್ತೆ ಅಂದರೆ ಯಾರು ತಾನೇ ಬೇಡ ಅಂತಾರೆ. ನಿಮಗೆ ಲಕ್ಷಗಟ್ಟಲೆ ಹಣ ಬಹುಮಾನವಾಗಿ ಬಂದಿದೆ ಆದರೆ ನೀವು ಅದನ್ನು ಪಡೆಯಲು ಒಂದಿಷ್ಟು ಹಣ ನೀಡಬೇಕು ಎನ್ನುವ ಮೆಸೇಜ್, ಫೋನ್ ಕರೆಗಳಿಗೇನು ಈಗ ಕೊರತೆಯಿಲ್ಲ. ಈಗ ಅಂತದ್ದೇ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು ಲಾಟರಿ ಬಹುಮಾನ ಪಡೆಯಲು ಹೋಗಿ 3.71 ಲಕ್ಷ ರೂ ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ 30 ಲಕ್ಷ ಲಾಟರಿ ಬಹುಮಾನ ಗೆದ್ದಿದ್ದೀರಿ ಎಂಬ ಸಂದೇಶ ಬಂದಿದೆ. ಅದನ್ನು ನಂಬಿ ತಮ್ಮ ಮೊಬೈಲ್ ನಂಬರನ್ನು ಹಂಚಿಕೊಂಡಿದ್ದಾರೆ. ನಂತರ ಮತ್ತೊಂದು ನಂಬರ್‌ನಿಂದ ವಾಟ್ಯಾಪ್ ಮೂಲಕ ಸಂಪರ್ಕಿಸಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಲೋಗೊ ಬಳಸಿ ತಾವು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾರೆ.
ನಂತರ ನೀವು ಈ ಬಹುಮಾನ ಪಡೆಯಲು ಸರ್ವಿಸ್ ಟ್ಯಾಕ್ಸ್ ಮತ್ತು ಇತರ ಶುಲ್ಕಗಳವನ್ನು ಬರಿಸಬೇಕು ಎಂದು ಹೇಳಿ ಹಂತ ಹಂತವಾಗಿ 3.71 ಲಕ್ಷ ರೂ ವರ್ಗಾಯಿಸಲು ಒತ್ತಾಯಿಸಿದ್ದಾರೆ. ಇದನ್ನು ನಂಬಿ ಹಣ ಕಳುಹಿಸಿದ್ದಾರೆ. ಆದರೆ ಯಾವುದೇ ಬಹುಮಾನ ಸಿಗದೆ ಇದ್ದಾಗ ತಾನು ಮೋಸ ಹೋಗಿರುವುದು ಆ ವ್ಯಕ್ತಿಗೆ ಗೋತ್ತಾಗಿದೆ.
ಸದ್ಯ ಘಟನೆ ಕುರಿತು ಸಂತ್ರಸ್ತರು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಪರಿಚಿತ ಸಂದೇಶಗಳು ಮತ್ತು ಹಣದ ಬೇಡಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.