Bigg Boss Kannada 12: ಬಿಗ್ ಬಾಸ್ ಮನೆಗೆ ಬೀಗ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?
ಜಾಲಿವುಡ್ ಸ್ಟುಡಿಯೋಸ್ ಬಂದ್ ಮಾಡಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಶೂಟಿಂಗ್ ನಿಲ್ಲಿಸಿದ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ಶೋ ಆಯೋಜಕರು ಮುಂದಾಗಿದ್ದಾರೆ. ಸದ್ಯ ಸ್ಟುಡಿಯೋ ಬಂದ್ ಆಗಿರುವುದರಿಂದ ಕನ್ನಡ ಬಿಗ್ ಬಾಸ್ ಶೋ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಒಂದುವೇಳೆ ಕೋರ್ಟ್‌ನಲ್ಲಿ ರಿಲೀಫ್ ಸಿಕ್ಕಕರೆ, ಒಂದೆರಡು ದಿನಗಳಲ್ಲಿ ಬಿಗ್‌ಬಾಸ್ ಸೆಟ್‌ನಲ್ಲೇ ಶೋ ಮುಂದುವರಿಯಲಿದೆ. ಇಲ್ಲವಾದಲ್ಲಿ ಬೇರೆ ಕಡೆ ಶಿಫ್ಟ್ ಮಾಡಲಾಗುತ್ತದೆಯೇ ಎಂಬುದೀಗ ಪ್ರಶ್ನೆಯಾಗಿದೆ.
ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ 2024ರಿಂದಲೇ ನಿಯಮ ಉಲ್ಲಂಘಿಸಿ ಬಿಗ್ ಬಾಸ್ ಮನೆಯ ಸೆಟ್ ಹಾಕಿ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಚಿತ್ರೀಕರಣ ಮಾಡುತ್ತಿತ್ತು. ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕುವ ಜೊತೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಬಿಗ್‌ಬಾಸ್ 12ನೇ ಆವೃತ್ತಿಯ ಚಿತ್ರೀಕರಣ ಸ್ಥಗಿತಗೊಂಡಿದೆ.
ಆಯೋಜಕರು ಇಂದು ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಹಾಗೂ ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಶೋ ಸೆಟ್, ಸ್ಪರ್ಧಾಳುಗಳ ವೆಚ್ಚ, ಖರ್ಚಿನ ವಿಚಾರದಲ್ಲಿ ಕೋಟ್ಯಾಂತರ ರೂ ವ್ಯಯಿಸಲಾಗಿದೆ ಎಂಬ ವಿಚಾರ ಇಟ್ಟುಕೊಂಡು ಕೋರ್ಟ್‌ಗೆ ಮನವಿ ಮಾಡಿಕೊಂಡು, ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳುವ ಸಾಧ್ಯತೆ ಇದೆ.