Bus Fire: ಕರ್ನೂಲ್ ಬಸ್ ದುರಂತ: ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಆಂಧ್ರದ ಕರ್ನೂಲ್ ಹೆದ್ದಾರಿಯ ಬಳಿ ಸಂಭವಿಸಿದ ಭೀಕರ ಬಸ್ ಬೆಂಕಿ ದುರಂತದಲ್ಲಿ ಇದುವರೆಗೆ ಸುಮಾರು 20 ಜನರು ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ
ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಮೂಲದ ಗೊಳ್ಳ ರಮೇಶ್ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳು ದಂಪತಿ ಸಹ ಸೇರಿದ್ದಾರೆ. ರಮೇಶ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಊರಿನಲ್ಲಿ ದೀಪಾವಳಿ ಹಬ್ಬ ಮುಗಿಸಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಕುಟುಂಬ ಸಮೇತ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ಸಿನಲ್ಲಿ 44 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶುಕ್ರವಾರ ಬಳಗಿನ ಜಾವ 3 ಗಂಟೆಯ ವೇಳೆಗೆ ಬೈಕ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಬೈಕ್ ಬಸ್ಸಿನ ಕೆಳಗಡೆಯಿಂದ ಮುಂದಕ್ಕೆ ಹೋಗಿ ಸಿಲುಕಿದೆ. ಇದರ ಅರಿವಿಲ್ಲದೆ ಬೈಕನ್ನು ಬಸ್ಸು ಒಂದಿಷ್ಟು ದೂರ ಎಳೆದೊಯ್ದಿದೆ. ಬೈಕ್ ನೆಲಕ್ಕೆ ಉಜ್ಜಿದ ಪರಿಣಾಮ ಅದರಿಂದ ಬೆಂಕಿ ಹೊತ್ತಿಕೊಂಡು ಇಡೀ ಬಸ್ಸನ್ನು ವ್ಯಾಪಿಸಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಸುಮಾರು 20 ಜನರು ಸಜೀವ ದಹನವಾಗಿದ್ದಾರೆ. 12 ಜನರು ಗಾಯಗೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘಟನೆ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.