Kodi Mutt Swamiji: ಸಿಎಂ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..!
ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಧಾರವಾಡದಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿವರೆಗೆ ಏನೂ ಹೇಳಲ್ಲ, ಸಿದ್ದರಾಮಯ್ಯ ಸರ್ಕಾರಕ್ಕೆ ಭಯವಿಲ್ಲ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ಸದ್ಯಕ್ಕೆ ಯಾವುದೇ ರಾಜಕೀಯ ಬದಲಾವಣೆಗಳು ಇಲ್ಲ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯನ ಸರ್ಕಾರಕ್ಕೆ ಸಂಕ್ರಾಂತಿವರೆಗೂ ಯಾವುದೇ ಸಮಸ್ಯೆ ಇಲ್ಲ. ಮುಂದಿನ ರಾಜಕೀಯ ಬದಲಾವಣೆಗಳನ್ನು ಸಂಕ್ರಾಂತಿ ಆದ ಮೇಲೆ ನೋಡಿ ಹೇಳಬೇಕು ಎಂದಿದ್ದಾರೆ. ಬಯಲು ಸೀಮೆಯಲ್ಲಿ ಮಲೆನಾಡು ಮಳೆ ಎಂದು ಈ ಹಿಂದೆ ಹೇಳಿದ್ದೆ. ಮಲೆನಾಡು ಬಯಲುಸೀಮೆ ಆಗಿದೆ, ಬಯಲುಸೀಮೆ ಮಲೆನಾಡು ಆಗಿದೆ ಎಂದು ಹೇಳಿದ್ದಾರೆ.
ದೇಶದಾದ್ಯಂತ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಹಿತಕ್ಕಾಗಿ ನಡೆಯುತ್ತಿವೆ. ದಸರಾದ ನಿಜವಾದ ಅರ್ಥವೆಂದರೆ ದುಷ್ಟ ಶಕ್ತಿಗಳನ್ನು ದೂರವಿಡುವುದಾಗಿದೆ. ಮನುಷ್ಯ ತನ್ನಲ್ಲಿನ ಕೋಪ, ತಾಪ, ಆಸೆಗಳನ್ನು ಗೆಲ್ಲಬೇಕು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಈ ದೃಷ್ಟಿಯಿಂದ ದಸರಾವನ್ನು ಆಚರಿಸಲಾಗುತ್ತದೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತವಾಗಿ ಎಂದು ತಿಳಿಸಿದರು.