Tamil nadu: ನಟ ವಿಜಯ್ ರ‍್ಯಾಲಿ ವೇಳೆ ಭೀಕರ ಕಾಲ್ತುಳಿತ: 39ಕ್ಕೆ ಏರಿದ ಸಾವಿನ್ ಸಂಖ್ಯೆ
ತಮಿಳುನಾಡಿನ ಕರೂರ್‌ನಲ್ಲಿ ಶನಿವಾರ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಅವರ ಪ್ರಚಾರದ ರ್‍ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ವಿಜಯ್ ಅವರ ಪಕ್ಷ ಟಿವಿಕೆ ರ್‍ಯಾಲಿ ಆಯೋಜಿಸಲಾಗಿತ್ತು. ರ್‍ಯಾಲಿಯಲ್ಲಿ ವಿಜಯ್ ಭಾಗಿಯಾಗಿದ್ದರು. ಈ ವೇಳೆ ಏಕಾಏಕಿ ಕಾಲ್ತುಳಿತ ಸಂಭವಿಸಿದ್ದು, ಇಲ್ಲಿಯವರೆಗೆ 39 ಜನ ಸಾವನ್ನಪ್ಪಿದ್ದಾರೆ. ಪ್ರಸ್ತುತ 5೦ ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಚಾರದ ಭಾಗವಾಗಿ ಸೆಪ್ಟೆಂಬರ್ 13ರಿಂದ ಪ್ರತಿ ಶನಿವಾರ ಜನಸಂಪರ್ಕ ರ್‍ಯಾಲಿ ಆರಂಭಿಸಲಾಗಿತ್ತು. ಈಗಾಗಲೇ ಎರಡು ರ್‍ಯಾಲಿ ನಿರೀಕ್ಷೆಗೂ ಮೀರಿದ ಯಶಸ್ವಿಯಾಗಿ ನಡೆದಿತ್ತು. ಪ್ರತಿ ರ್‍ಯಾಲಿಯಲ್ಲಿ ಲಕ್ಷಾಂತರ ಜನ ಭಾಗಿಯಾಗಿ ವಿಜಯ್ಗೆ ಬೆಂಬಲ ನೀಡಿದ್ದರು. ಆದರೆ ನಿನ್ನೆ ನಡೆದ ರ್‍ಯಾಲಿ ಸಾವಿನ ರ್‍ಯಾಲಿಯಾಗಿ ಹೋಗಿದೆ.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು. ಇದರಿಂದಾಗಿ ಜನಸಾಗರವೇ ಸೇರಿತ್ತು.. ವಿಜಯ್ ರ್‍ಯಾಲಿಗೆ ಮಕ್ಕಳು, ವೃದ್ಧರು, ಮಹಿಳೆಯರು ಬಂದಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ ಗಾಯಗೊಂಡು, ಅಸ್ವಸ್ಥರಾದವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ಆಂಬುಲೆನ್ಸ್ನಲ್ಲಿ ಸಾಗಿಸಲಾಯ್ತು. ಆಸ್ಪತ್ರೆಯಲ್ಲಿ ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬಸ್ಥರ ಪರದಾಡುತ್ತಿದ್ದಾರೆ.
ರ್‍ಯಾಲಿಯ ವೇಳೆ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗಿದ್ದು ಇದುವರೆಗೆ 10 ಮಕ್ಕಳು, 17 ಮಹಿಳೆಯರು ಸೇರಿದಂತೆ ಒಟ್ಟು 39 ಮಂದಿ ಸಾವನ್ನಪ್ಪಿದ್ದಾರೆ. ಈ ವಿವರ ತಿಳಿಯುತ್ತಿದ್ದಂತೆ
ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರು, ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ತನಿಖಾ ಆಯೋಗ ರಚಿಸಿ ಈ ಘಟನೆಯ ತನಿಖೆಗೆ ಆದೇಶಿಸಿದರು. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಘೋಷಿಸಿದ್ದಾರೆ.