Mogalli Ganesh: ಹಿರಿಯ ಸಾಹಿತಿ ಮೊಗಳ್ಳಿ ಗಣೇಶ್ ನಿಧನ
ಕನ್ನಡದ ಕಾದಂಬರಿಕಾರ, ಕತೆಗಾರ, ವಿಮರ್ಶಕ ಡಾ. ಮೊಗಳ್ಳಿ ಗಣೇಶ್ ಅವರು (64) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಜಯನಗರದ ಹೊಸಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ವಿಧಿವಶರಾಗಿದ್ದಾರೆ.
ಮೊಗಳ್ಳಿ ಗಣೇಶ್ ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಅಂಗಾಂಗ ವೈಫಲ್ಯದಿಂದಾಗಿ ವಿಧಿವಶರಾಗಿದ್ದಾರೆ. ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
ಮೊಗಳ್ಳಿ ಗಣೇಶ್ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಮದ್ದೂರಿನ ನಿಡಘಟ್ಟದ ಬಳಿ ಇರುವ ಅವರ ಸ್ವಂತ ಊರು ಸಂತೆಮೊಗೇನ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೊಗಳ್ಳಿ ಗಣೇಶ್ ಅವರು ಮುಖ್ಯವಾಗಿ ತಮ್ಮ ಕಥೆಗಳ ಮೂಲಕವೇ ಖ್ಯಾತರಾದರು. ಅವರ ಮೊದಲ ಕಥಾಸಂಕಲನ ‘ಬುಗರಿ’ ಕನ್ನಡ ಓದುಗ ವಲಯದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಇದರ ಜೊತೆಗೆ, ಹತ್ತಾರು ಮಹತ್ವದ ಕಥಾ ಸಂಕಲನಗಳು, ಲೇಖನಗಳು ಹಾಗೂ ವಿಮರ್ಶಾ ಪುಸ್ತಕಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಸಾಹಿತ್ಯದ ಸಾಧನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಗೌರವಗಳನ್ನು ಪಡೆದಿದ್ದರು.
ಸಿಎಂ ಸಿದ್ಧರಾಮಯ್ಯರಿಂದ ಸಂತಾಪ
ನಾಡಿನ ಪ್ರಖ್ಯಾತ ಸಾಹಿತಿ ಡಾ.ಮೊಗಳ್ಳಿ ಗಣೇಶ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಕನ್ನಡ ಸಾಹಿತ್ಯ ಲೋಕಕ್ಕೆ ಕತೆ, ಕಾವ್ಯ, ಕಾದಂಬರಿಗಳನ್ನು ನೀಡುವುದರ ಜೊತೆಯಲ್ಲಿ ಜಾನಪದವನ್ನೂ ಒಳಗೊಂಡಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಮಾಡಿರುವ ಅಧ್ಯಯನ ಮತ್ತು ಸಂಶೋಧನೆ ಅನನ್ಯವಾದುದು. ಸತ್ಯ ನಿಷ್ಠುರಿಯಾಗಿದ್ದ ಡಾ.ಮೊಗಳ್ಳಿ ಅವರು ಖಚಿತವಾದಂತಹ ಒಲವು-ನಿಲುವುಗಳನ್ನು ಹೊಂದಿದವರು. ಅವರಿನ್ನೂ ಬಹಳಷ್ಟು ಬರೆಯುವುದಿತ್ತು. ಅವರ ಅನಿರೀಕ್ಷಿತ ನಿರ್ಗಮನದಿಂದ ಕನ್ನಡ ಸಾಹಿತ್ಯ ಬಡವಾಗಿದೆ. ಡಾ.ಮೊಗಳ್ಳಿ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಕುಟುಂಬ ಮತ್ತು ಗೆಳೆಯರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.