Chandan Sharma:ಅಮಾಯಕರ ಎದೆಗೆ ಗುಂಡು.. ಕೈಯಲ್ಲಿ ಕ್ರಿಕೆಟ್ ಚೆಂಡು- ದೇಶ ಭಕ್ತಿಯೋ, BCCI ದ್ರೋಹವೋ?
ಯಾವುದೇ ವಿಷಯ ಅಳೆದು ತೂಗಿ ಮಾತನಾಡುವ ಅಭ್ಯಾಸವಿಲ್ಲ. ದೇಶದ ವಿಷಯ ಬಂದಾಗ, ಈ ನೆಲದ ಮಣ್ಣಿನ ಋಣ ನನ್ನ ಮೇಲಿರುವಾಗ ಅದೇನು ಬೇಕಾದರೂ ಆಗಲಿ, ದೇಶ ಮೊದಲು.. ನನ್ನ ತಾಯಿಯೇ ಮೊದಲು.. ಆಕೆಯ ಮಡಿಲೇ ಸ್ವರ್ಗ..
ಅದೇ ತಾಯಂದಿರ ಕುಂಕುಮ ಅಳಿಸಿ, ಸೈನಿಕರ ರಕ್ತ ಹರಿಸಿ, 26 ಅಮಾಯಕ ಭಾರತೀಯರ ಪ್ರಾಣ ತೆಗೆದ ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಪಂದ್ಯ! ವಿಷಯ ಕೇಳಿದರೇನೇ ಮನಸ್ಸು ಕಲಕುತ್ತದೆ. ನೋವು, ಆಕ್ರೋಶ ಒಮ್ಮೆಲೇ ಉಮ್ಮಳಿಸಿ ಬರುತ್ತದೆ.
ನಾಚಿಕೆ, ಮಾನ-ಮರ್ಯಾದೆ ಎಲ್ಲವೂ ಬಿಟ್ಟು ಪ್ರಪಂಚದ ಮುಂದೆ ಭಿಕಾರಿಯಾಗಿ, ಭಿಕ್ಷಾ ಪಾತ್ರೆ ಹಿಡಿದು ನಿಂತಿರುವ ಕ್ರಿಮಿ, ಮಲದ ಹುಳು ಪಾಕಿಸ್ತಾನ! ತನ್ನದೇ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಭಯೋತ್ಪಾದಕರಿಗೆ ಮೃಷ್ಟಾನ್ನ ತಿನ್ನಿಸುತ್ತಿದೆ. ಅಂಥ ದೇಶದೊಂದಿಗೆ ಕೈ ಕುಲುಕಿ, ಹಲ್ಲು ಕಿರಿದು ಕ್ರಿಕೆಟ್ ಆಡುವುದಿದೆಯಲ್ಲ ಅದಕ್ಕಿಂತ ರೇಜಿಗೆ ಹುಟ್ಟಿಸುವ ವಿಷಯ ಮತ್ತೊಂದು ಇರಲಾರದು.
ನಾನು ಬರೀ ಆಟದ ಬಗ್ಗೆ ಮಾತಾಡ್ತಿಲ್ಲ, ಇದು ನಮ್ಮ ರಾಷ್ಟ್ರದ ಆತ್ಮಗೌರವದ ಪ್ರಶ್ನೆ. ಕ್ರಿಕೆಟ್ನಲ್ಲಿ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ರಾಷ್ಟ್ರ ಭಕ್ತಿಯೂ ಬೆರೆತು ಹೋಗಿದೆ.
ಪಹಲ್ಗಾಮ್‌ನ ರಕ್ತದ ಕಲೆ ಮಾಸುವ ಮುನ್ನವೇ ಕ್ರಿಕೆಟ್ ಸಂಭ್ರಮವೇ?
2025ರ ಏಪ್ರಿಲ್ 22, ಆ ಕರಾಳ ದಿನವನ್ನು ನಾವು ಮರೆಯಲು ಸಾಧ್ಯವೇ? ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಮ್ಮ 26 ಅಮಾಯಕ ಪ್ರವಾಸಿಗರನ್ನು, ಅದರಲ್ಲೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಗುಂಡಿಕ್ಕಿ ಸಾಯಿಸಿ ಬಿಟ್ಟರಲ್ಲ. ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಸೇನೆ ‘ಆಪರೇಷನ್ ಸಿಂಧೂರ್’ ನಡೆಸಿ ಉಗ್ರರ ಹೆಡೆಮುರಿ ಕಟ್ಟಿತು. ಆ ವೀರ ಯೋಧರ ತ್ಯಾಗ, ಆ ಅಮಾಯಕರ ಚೀತ್ಕಾರ ನಮ್ಮ ಕಿವಿಯಲ್ಲಿ ಇನ್ನೂ ಮಾರ್ದನಿಸುತ್ತಿರುವಾಗಲೇ, ನಾವು ಅದೇ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಬೇಕೇ? ಇದು ನಮ್ಮ ರಾಷ್ಟ್ರೀಯತೆಗೆ ಮಾಡುವ ಅವಮಾನವಲ್ಲವೇ?
ಇನ್ನೂ ಕೆಲವರಿಗೆ ರಾಷ್ಟ್ರೀಯತೆ ಬೇರೆಯಂತೆ.. ಕ್ರಿಕೆಟ್ ಬೇರೆಯಂತೆ. ಅವೆರಡನ್ನೂ ಬೆರಸಬಾರದಂತೆ! ಸರಿ, ಪಹಲ್ಗಾಮ್ ದಾಳಿಯಲ್ಲಿ ನಿಮ್ಮ ಕುಟುಂಬದ ಸದಸ್ಯರು ಯಾರಾದರೂ ಇದ್ದಿದ್ದರೆ, ಆಗಲೂ ನೀವು ಇದೇ ಮಾತನ್ನು ಹೇಳ್ತಿದ್ರ? ನಿಮ್ಮ ಮನೆಯವರ ರಕ್ತದ ಕಲೆ ಇರುವಾಗ, ಕಪಟಿ ರಾಷ್ಟ್ರದೊಂದಿಗೆ ಕೈಕುಲುಕಿ ಆಟವಾಡಲು ನಿಮ್ಮ ಮನಸ್ಸು ಒಪ್ಪುತ್ತಿತ್ತೇ? ಇಲ್ಲ ತಾನೇ? ಹಾಗಾದರೆ, ಆ 26 ಜೀವಗಳು ನಮ್ಮ ಕುಟುಂಬದವರಲ್ಲವೇ? ಪ್ರತಿಯೊಬ್ಬ ಭಾರತೀಯನೂ ನಮ್ಮ ಸಹೋದರ, ಸಹೋದರಿಯಲ್ಲವೇ? ಅವರ ಸಾವಿಗೆ ಬೆಲೆ ಇಲ್ಲವೇ?
ಸಂಪೂರ್ಣ ಬಹಿಷ್ಕಾರಕ್ಕೆ ಮೀನಾ-ಮೇಷ ಯಾಕೆ? ದುಡ್ಡಿನ ಮುಂದೆ ರಾಷ್ಟ್ರ ಪ್ರೇಮ- ಮಾರುವ ಸರಕೇ? ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆ. ಅದರ ನಿವ್ವಳ ಮೌಲ್ಯ 18,000 ಕೋಟಿ ರೂಪಾಯಿಗಿಂತಲೂ ಹೆಚ್ಚು. ಒಂದು ಅಂದಾಜಿನ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದಿಂದಲೇ ಸುಮಾರು 1400 ಕೋಟಿ ರೂಪಾಯಿಗಳ ಆದಾಯ ಬರುತ್ತದೆ. ಈ ಹಣದ ಆಸೆಗಾಗಿಯೇ ಬಿಸಿಸಿಐ ನಮ್ಮ ರಾಷ್ಟ್ರೀಯ ಭಾವನೆಗಳನ್ನು ಮೂಲೆಗುಂಪು ಮಾಡುತ್ತಿದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ!
ಅಂದ ಹಾಗೆ, ಅನಾದಿ ಕಾಲದ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬಲ್ಲ ನಮ್ಮ ಸರ್ಕಾರಕ್ಕೆ, ತನ್ನ ಕಣ್ಣ ಮುಂದೆಯೇ ನಡೆಯುವ ಒಂದು ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಲು ಏಕೆ ಸಾಧ್ಯವಿಲ್ಲ? ಸಂಪೂರ್ಣ ಬಹಿಷ್ಕಾರದ ನಿರ್ಧಾರವನ್ನು ತೆಗೆದುಕೊಳ್ಳಲು ಯಾವುದು ಅಡ್ಡಿ? ದುಡ್ಡ?BCCI ನ ಮೂರು ಕಾಸಿನ ದೌಲತ್ತ?
Let us take an oath!
ಬನ್ನಿ.. ಶಪಥ ಮಾಡೋಣ!
ಸರ್ಕಾರ ಮತ್ತು ಬಿಸಿಸಿಐ ತಮ್ಮ ನಿರ್ಧಾರವನ್ನು ಬದಲಿಸದಿದ್ದರೆ, ನಮ್ಮ ಕರ್ತವ್ಯವನ್ನು ನಾವು ಮಾಡೋಣ. ಈ ಪಂದ್ಯ ನಡೆದರೆ, ನಾವು ಯಾರೂ ನಮ್ಮ ಟಿವಿಗಳನ್ನು ಆನ್ ಮಾಡೋದೇ ಬೇಡ. ಕ್ರೀಡಾಂಗಣದತ್ತ ಹೆಜ್ಜೆ ಹಾಕೋದೂ ಬೇಡ. ಈ ಪಂದ್ಯದ ವೀಕ್ಷಕರ ಸಂಖ್ಯೆ ಶೂನ್ಯವಾಗಲಿ. ನಮ್ಮ ಬಹಿಷ್ಕಾರದ ಶಕ್ತಿ ಅವರಿಗೆ ಮುಟ್ಟಲಿ. ರಾಷ್ಟ್ರದ ಹಿತಾಸಕ್ತಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಸಂದೇಶ ಜಗತ್ತಿಗೆ ಸಾರಲಿ.
ಪ್ರಧಾನಿ ಮೋದಿಯವರೇ, ನೀವು ಈ ದೇಶದ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲಿರಿ. ಈ ಪಂದ್ಯವನ್ನು ರದ್ದುಗೊಳಿಸಿ, ಭಯೋತ್ಪಾದಕರಿಗೆ ಮತ್ತು ಅವರಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ರವಾನಿಸಿ. ನಮ್ಮ ದೇಶದ ಘನತೆಯನ್ನು ಎತ್ತಿಹಿಡಿಯಿರಿ. ರಾಷ್ಟ್ರ ಮೊದಲು, ಉಳಿದೆಲ್ಲವೂ ನಂತರ. ನಿಮ್ಮ ನಾಯಕತ್ವದಲ್ಲಿ ಭಾರತವು ಜಾಗತಿಕವಾಗಿ ತಲೆ ಎತ್ತಿ ನಿಂತಿದೆ. ಭಯೋತ್ಪಾದನೆಯನ್ನು ಮಟ್ಟಹಾಕುವ ನಿಮ್ಮ ಸಂಕಲ್ಪವನ್ನು ನಾವು ನೋಡಿದ್ದೇವೆ. ಆದರೆ, ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 14, 2025 ರಂದು ನಡೆಯಲಿರುವ ಏಷ್ಯಾ ಕಪ್ ಪಂದ್ಯವು ನಮ್ಮ ದೇಶದ ನಿಲುವಿಗೆ ಕಪ್ಪು ಚುಕ್ಕೆಯಾಗಲಿದೆ. ಹೀಗಾಗಲು ನೀವು ಬಿಡಬಾರದು!
ಹರ್-ಘರ್ ತಿರಂಗ ಎಂದು ಮನೆ ಮನೆಗೆ ಕರೆ ಕೊಡುವ ಸರ್ಕಾರ. ನಮ್ಮಲ್ಲೇ ಇರುವ ಕೆಲವೇ ಕೆಲವು ಹುಳುಗಳನ್ನು ಬಿಟ್ಟು ದೇಶದ ಪ್ರತಿಯೊಬ್ಬನ ಮನ ಮನದಲ್ಲೂ ತಿರಂಗ ಸದಾ ರಾರಾಜಿಸುತ್ತಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಲಿ..
ಇಷ್ಟೆಲ್ಲಾ ಭಾವನೆಗಳನ್ನು ಬಲಿ ಕೊಟ್ಟು ಪಂದ್ಯ ನಡೆಸಲೇ ಬೇಕು ಅಂತಿದ್ದರೆ, ಈ ರಾಷ್ಟ್ರದ ಜನರಿಗೆ ಸರ್ಕಾರ, BCCI ಮಾಡುವ ಅತೀ ದೊಡ್ಡ ಅಪಮಾನ ಅನ್ನುವುದನ್ನು ನೆನಪಿಟ್ಟುಕೊಳ್ಳಿ.
ಅಲ್ಲಿ ಪುಟಿಯುವ ಒಂದೊಂದು ಎಸೆತವೂ ದೇಶದ ತಾಯಂದಿರ ಎದೆ ಛಿದ್ರ ಮಾಡುವ ಬಿರುಗಾಳಿ ಅನ್ನುವುದನ್ನು ಮರೆಯದಿರಿ..
ಎದುರಿಗೆ ಸಾವೇ ಬಂದರೂ ಕೇವಲ ಬಾಯಿಂದ ಮಾತ್ರವಲ್ಲ, ಹೃದಯದಿಂದ ಹೊರ ಹೊಮ್ಮವುದು ಒಂದೇ ಮಾತು!
ಭಾರತಾಂಬೆ ನನ್ನ ತಾಯಿ.. ನನ್ನ ಪೊರೆವ ತೊಟ್ಟಿಲು..!
ಜೈ ಹಿಂದ್!