Foeticide: ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಹತ್ಯೆ ಮಾಡುತ್ತಿದ್ದ ಗ್ಯಾಂಗ್: ಮಹಿಳೆ ಸೇರಿ ಮೂವರು ಆರೆಸ್ಟ್
ಭ್ರೂಣ ಪತ್ತೆ ಹಾಗೂ ಹತ್ಯೆ ಎರಡು ಕಾನೂನು ಬಾಹಿರ. ಆದರೂ ಇಂತಹ ಹೇಯ ಕೃತ್ಯಗಳು ಮುಂದುವರೆದಿದೆ. ಮೈಸೂರಿನಲ್ಲಿ ಅಂತಹದೇ ಒಂದು ಗ್ಯಾಂಗ್ ಅನ್ನುಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಸಮೀಪ ಹನುಗನಹಳ್ಳಿ ಗ್ರಾಮದ ಹೊರವಲಯದಲ್ಲಿದ್ದ ಐಷಾರಾಮಿ ಬಂಗಲೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಮಾಡಲಾಗುತ್ತಿತ್ತು. ಈ ಬಂಗಲೆಗೆ ಗರ್ಭಿಣಿಯರನ್ನು ಕರೆತಂದು ಅವರ ಹೊಟ್ಟೆಯಲ್ಲಿರುವ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿತ್ತು. ಹೆಣ್ಣು ಅಥವಾ ಗಂಡು ಎಂದು ಪತ್ತೆ ಮಾಡಿ ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಲಾಗುತ್ತಿತ್ತು. ಈ ಜಾಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆಯಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಡೈರಿ ಒಂದು ಪತ್ತೆಯಾಗದ್ದು, ಲಕ್ಷಾಂತರ ವಹಿವಾಟು ನಡೆದಿದೆ. ಭ್ರೂಣಲಿಂಗ ಪತ್ತೆಗಾಗಿ 25,000 ರೂ. ಹಾಗೂ ಹೆಣ್ಣು ಭ್ರೂಣ ಹತ್ಯೆಗೆ 30 ಸಾವಿರ ರೂಪಾಯಿ ನಿಗದಿ ಮಾಡಿದ್ದರು. ಮನೆಯಲ್ಲಿದ್ದ ಲಾಕರ್ ನಲ್ಲಿ ಮೂರು ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆ. ಭ್ರೂಣ ಹತ್ಯೆಗೆ ಬಳಸುತ್ತಿದ್ದ ಕಿಟ್ ಗಳು, ಔಷಧಗಳು ಸೇರಿ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ, ಮಂಡ್ಯ ಡಿಹೆಚ್ಓ ಮೋಹನ್ ಹಾಗೂ ಮೈಸೂರು ಡಿಹೆಚ್ಓ ಕುಮಾರಸ್ವಾಮಿ, ಮಂಡ್ಯ ಕುಟಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ ನೇತೃತ್ವದಲ್ಲಿ ವರುಣ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳ ಕೃತ್ಯ ಬಯಲಿಗೆಳೆಯಲು ಗರ್ಭಿಣಿಯೊಬ್ಬರ ಸಹಾಯ ಪಡೆಯಲಾಗಿದೆ. ವರುಣ ಠಾಣೆ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಓರ್ವ ಮಹಿಳೆ ಸೇರಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೆ ಇಬ್ಬರು ಗರ್ಭಿಣಿಯರು ಭೂಣ ಲಿಂಗ ಪತ್ತೆಗೆ ಆಗಮಿಸಿದ್ದರು. ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.