DK Shivakumar: ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ: ಡಿಸಿಎಂ ಡಿಕೆ ಶಿವಕುಮಾರ್
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ವೇಳೆ ಪಕ್ಷ ನಿಷ್ಠನಾಗಿ ನಾನು ಜೈಲುವಾಸ ಆಯ್ಕೆ ಮಾಡಿಕೊಂಡೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಆಫರ್ ಬಗ್ಗೆ ಬಾಯಿಬಿಟ್ಟಿದ್ದಾರೆ.
ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಲೇಖಕ ಕೆ.ಎಂ. ರಘು ಅವರು ರಚಿಸಿದ ‘ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ. ಶಿವಕುಮಾರ್’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್‌ಗೆ ಕರೆದುಕೊಂಡು ಬಂದೆ. ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್ ಫೋನ್‌ನಿಂದ ಕರೆ ಬಂದಿತ್ತು. ನನ್ನ ಜೊತೆ ಡಿಜಿಯೂ ಇದ್ದರು. ಅವರು ದೂರವಾಣಿ ಕರೆಯಲ್ಲಿ ಮಾತನಾಡಿದರು. ನನ್ನ ಜೊತೆ ಡಿ.ಕೆ. ಸುರೇಶ್ ಅವರೂ ಇದ್ದರು. ಕರೆ ಮಾಡಿದವರು ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ ಎಂದು ಕೇಳಿದರು. ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ ಎಂದು ಆಯ್ಕೆ ನೀಡಿದರು ಎಂದು ತಿಳಿಸಿದರು.
ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ಅವರು ನನಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದರು. ಬಂಗಾರಪ್ಪ ಅವರು ನನಗೆ ಸಹಕಾರ ನೀಡಿದ್ದರು. ಈ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ ಎಂದರು.
ರಾಜಕೀಯದಲ್ಲಿ ಯಾವುದೂ ನಿಂತ ನೀರಲ್ಲ. A Symbol Of Loyalty ಪುಸ್ತಕದಲ್ಲಿ ನನ್ನ ಬದುಕಿನ ಶೇ 99 ರಷ್ಟು ಅಂಶಗಳು ಸತ್ಯ ಇವೆ. ನಾನು ಮುಂದಿನ 8-10 ವರ್ಷ ಮಾತ್ರ ಸಕ್ರಿಯ ರಾಜಕಾರಣದಲ್ಲಿ ಇರಬಲ್ಲೆ, ನಾವು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ನಾನು ಹೆಚ್ಡಿ ದೇವೇಗೌಡರ ಕುಟುಂಬದ ವಿರುದ್ಧವಾಗಿ ರಾಜಕಾರಣ ಮಾಡಿದ್ದೇನೆ. ಪಕ್ಷದ ನಿಷ್ಠೆಗಾಗಿ ನಾನು ಹೆಚ್ಡಿ ಕುಮಾರಸ್ವಾಮಿ ಜೊತೆಗೆ ಕೈಜೋಡಿಸಿದ್ದೇನೆ. ಆದರೆ, ನಾನು ಜೈಲಿಗೆ ಹೋದಾಗ, ‘ನಾವೇನು ದುಡ್ಡು ಹೊಡಿ ಎಂದು ಹೇಳಿದ್ದೆವಾ?’ ಎಂದು ಅವರೇ ನನ್ನನ್ನು ಅಣಕಿಸಿದ್ದು ಬಹಳ ನೋವುಂಟುಮಾಡಿತು,” ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಹಾಡು ಹೇಳಿದ್ದನ್ನು ವಿವಾದ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, RSS ಬಗ್ಗೆ ನಾನು ಸದನದಲ್ಲಿ ಮಾತನಾಡಿದ್ದಕ್ಕೆ ಕ್ಷಮಾಪಣೆ ಕೇಳು ಎಂದು ನನಗೆ ಯಾರೂ ಹೇಳಲಿಲ್ಲ. ನನ್ನ ಕಾರ್ಯಕರ್ತರಿಗೆ ನೋವು ಆಗಬಾರದು ಎಂದು ಕ್ಷಮೆ ಕೇಳಿದೆ.