Bheema river: ಭೀಮಾತೀರದಲ್ಲಿ ಮಳೆಯೋ ಮಳೆ. ಮುನಿದ ವರುಣ..!
2025 ಈ ವರ್ಷವನ್ನು ಯಾರೂ ಮರೆಯುವಂತಿಲ್ಲ. ಅದ್ಯಾಕೋ ಗೊತ್ತಿಲ್ಲ ಈ ವರ್ಷದಲ್ಲಿ ಮಳೆಗಾಲಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಹಿಂಗಾರು, ಮುಂಗಾರು ಎಲ್ಲವೂ ಅದಲಿ ಬದಲಾಗಿದೆ. ಹೇಳದೇ ಮಳೆರಾಯನ ಆಗಮನವಾಗುತ್ತೆ. ಮಳೆಯ ಅಬ್ಬರಕ್ಕೆ ಕರ್ನಾಟಕ ತತ್ತರಿಸಿ ಹೋಗಿದೆ. ಇದೀಗ ಉತ್ತರ ಕರ್ನಾಟಕ ಕೂಡ ಮಳೆಗೆ ಥಂಡಾ ಹೊಡೆದಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಭೀಮಾತೀರದಲ್ಲಿ ಆತಂಕ ಮೂಡಿಸಿದೆ.
ನಿತ್ಯ ಸುರೀತಾ ಇರೋ ಮಳೆಯಿಂದಾಗಿ ಮಹಾರಾಷ್ಟ್ರ ಕೆರೆಯಂತಾಗಿದೆ. ಮಹಾರಾಷ್ಟ್ರದ ಉಜನಿ, ವೀರಾ ಜಲಾಶಯದಿಂದ 2.90 ಲಕ್ಷ ಕ್ಯೂಸೆಕ್ಸ್ ನೀರನ್ನು ಭೀಮ ನದಿಗೆ ಹರಿಸ್ತಾ ಇರೋ ಪರಿಣಾಮವಾಗಿ ಭೀಮಾ ತೀರ ಪ್ರವಾಹದ ಭೀತಿ ಎದರುಸಿತ್ತಿದೆ. ವಿಜಯಪುರ ಜಿಲ್ಲೆಯ ಭೀಮಾನದಿ ತೀರ ಪ್ರವಾಹಕ್ಕೆ ನಲುಗಿ ಹೋಗಿದೆ. ಅಲಮೇಲ ತಾಲ್ಲೂಕಿನ ದೇವಣಗಾಂವನ ಆಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಹಳೆಯ ತಾವರಖೇಡ ಗ್ರಾಮದ ಮನೆಗಳಿಗೂ ನೀರು ನುಗ್ಗಿದೆ.
ಕಲಬುರಗಿಯ ಗಾಣಗಾಪೂರದ ಸಂಗಮ ಕ್ಷೇತ್ರದ ಪಾರಾಯಣ ಮಂಟಪ, ಫತ್ತರಗ ಗ್ರಾಮದ ಪಶುಸಂಗೋಪನಾ ಆಸ್ಪತ್ರೆಗೂ ನೀರು ನುಗ್ಗಿದೆ. ಭಾರೀ ಮಳೆಯಿಂದಾಗಿ ಜೇವರ್ಗಿ ತಾಲೂಕಿನ ಮಾಹೂರ ಗ್ರಾಮದ ಸಂರ್ಪಕ ಕಡಿತಗೊಂಡಿದೆ. ಪ್ರವಾಹವನ್ನೂ ಲೆಕ್ಕಿಸದೇ ಪೋಷಕರು ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು ಶಾಲೆಗೆ ಕಳುಹಿಸ್ತಿರೋ ದೃಶ್ಯಗಳು ಎಲ್ಲರ ಮನಕಲಕುವಂತಿದೆ.
ಕಲಬುರಗಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರುನ್ನುಮ್ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಅಂತಾ ಡಿಸಿ ಫೌಜಿಯಾ ಕಾಲಿಗೆ ಬಿದ್ದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಭೀಮಾನದಿಗೆ 3.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಇನ್ನಷ್ಟು ಆತಂಕ ಸೃಷ್ಟಿಸಿದೆ.