Hasan: ಹಾಸನಾಂಬೆಗೆ 25 ಕೋಟಿ ರೂ. ಆದಾಯ
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬ ದರ್ಶನೋತ್ಸವ ಅಂತ್ಯವಾಗಿದ್ದು, ಈಗಾಗಲೇ ಗರ್ಭಗುಡಿ ಕೂಡ ಬಂದ್ ಮಾಡಲಾಗಿದೆ. ಈಗ ದೇವಾಲಯದ ಹುಂಡಿ ಎಣಿಕೆ ಕಾರ್ಯ ಕೂಡ ನಡೆದಿದೆ. ಹುಂಡಿಯಲ್ಲೇ ಬರೋಬ್ಬರಿ 3 ಕೋಟಿ 68 ಲಕ್ಷದ 12 ಸಾವಿರದ 275 ರೂ. ಸಂಗ್ರಹವಾಗಿದೆ.
ಒಟ್ಟು 14 ಹುಂಡಿಗಳಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ 68 ಲಕ್ಷದ 12 ಸಾವಿರದ 275 ರೂಪಾಯಿ ಹಣ ಸಂಗ್ರಹವಾಗಿದೆ. ಇನ್ನೂ ದೇವರ ದರ್ಶನಕ್ಕಾಗಿ 300 ರೂಪಾಯಿ, 1 ಸಾವಿರ ರೂಪಾಯಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿತ್ತು. ಈ ಟಿಕೆಟ್ ಹಾಗೂ ಲಾಡು ಪ್ರಸಾದದ ಮಾರಾಟದಿಂದಲೇ 21,91,75,052 ರೂಪಾಯಿ ಹಣ ಸಂಗ್ರಹವಾಗಿದೆ.
ಹುಂಡಿ ಹಣ ಹಾಗೂ ಟಿಕೆಟ್ ಮಾರಾಟದಿಂದ ಒಟ್ಟಾರೆ 25,59,87,327 ರೂಪಾಯಿ ಹಣ ಸಂಗ್ರಹವಾಗಿದೆ. ಇನ್ನು ಹಾಸನಾಂಬೆಗೆ ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ ಸಹ ಬಂದಿದೆ. ವಿದೇಶಿ ಕರೆನ್ಸಿ ನೋಟುಗಳು, ಬ್ಯಾನ್ ಆದ ಹಳೆಯ 500 ರೂಪಾಯಿ ನೋಟುಗಳು ಸಹ ಹುಂಡಿಗೆ ಹಾಕಿದ್ದಾರೆ. ದೇವರಿಗೆ ಹರಕೆಯ ಪತ್ರಗಳು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ.