Hassan: ಸಮೀಕ್ಷೆ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳ ದಾಳಿ, ರಕ್ಷಣೆಗೆ ಬಂದವರ ಮೇಲೂ ದಾಳಿ
ಸಾಮಾಜಿಕ ಆರ್ಥಿಕ ಶೈಕ್ಷಣಿಕ ಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಬೇಲೂರಿನ ನೆಹರುನಗರದಲ್ಲಿ ನಡೆದಿದೆ.
ಬೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಿಕ್ಕಮ್ಮನವರ ಮುಖ, ಕೈ ಕಾಲಿಗೆ ಬೀದಿ ನಾಯಿಗಳು ಕಚ್ಚಿದ್ದು, ಶಿಕ್ಷಕಿಯ ರಕ್ಷಣೆಗೆ ಬಂದ ಅವರ ಪತಿ ಸೇರಿ ಏಳು ಜನರ ಮೇಲೂ ನಾಯಿಗಳು ದಾಳಿ ಮಾಡಿವೆ. ಪರಿಣಾಮ ಶಿಕ್ಷಕಿ ಜೊತೆ ಇತರೆ 7 ಮಂದಿ ಕೂಡ ಗಾಯಗೊಂಡಿದ್ದಾರೆ. ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಶಿಕ್ಷಕಿ ಚಿಕ್ಕಮ್ಮಗೆ ನೀಡಿದ್ದ ಸಮೀಕ್ಷೆ ಅವಧಿ ಇಂದು ಕೊನೆಯಾಗಿತ್ತು. ಇನ್ನು 3 ಮನೆಗಳ ಸಮೀಕ್ಷೆ ಬಾಕಿ ಇತ್ತು. ನವೀನ್ ಎಂಬುವರ ಮನೆ ಸಮೀಕ್ಷೆಗೆ ಚಿಕ್ಕಮ್ಮ ತೆರಳಿದ್ದು, ಈ ವೇಳೆ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿವೆ. ಪತ್ನಿ ರಕ್ಷಿಸಲು ಮುಂದಾದ ಪತಿ ಶಿವಕುಮಾರ್ಗೂ ನಾಯಿಗಳು ಕಚ್ಚಿವೆ.
ಚಿಕ್ಕಮ್ಮ ಮತ್ತು ಪತಿ ಶಿವಕುಮಾರ್ ರಕ್ಷಣೆಗೆ ಬಂದಿದ್ದ ಧರ್ಮ, ಪೃಥ್ವಿ ಮತ್ತು ಸಚಿನ್ ಸೇರಿದಂತೆ 7 ಜನರ ಮೇಲೂ ನಾಯಿಗಳು ದಾಳಿ ಮಾಡಿವೆ. ಅಲ್ಲದೆ ಅಲ್ಲೇ ಆಟವಾಡುತ್ತಿದ್ದ 5 ವರ್ಷದ ಬಾಲಕ ಕಿಶನ್ಗೂ ನಾಯಿಗಳು ಕಚ್ಚಿವೆ. ಸದ್ಯ ಎಲ್ಲರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.