Menstrual Leave: ಉದ್ಯೋಗಸ್ಥ ಮಹಿಳೆಯರಿಗೆ ಗುಡ್ ನ್ಯೂಸ್: ವೇತನ ಸಹಿತ ‘ಋತುಚಕ್ರ ರಜೆ’ಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ!
ರಾಜ್ಯ ಸರ್ಕಾರವು ಉದ್ಯೋಗಸ್ಥ ಮಹಿಳೆಯರಿಗೆ ಶುಭ ಸುದ್ದಿ ನೀಡಿದೆ. ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋತುಚಕ್ರ ರಜೆ ನೀಡುವ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಮಹಿಳೆಯರಿಗೂ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತುಚಕ್ರದ ರಜೆ ನೀಡಲಾಗುತ್ತೆ. ವರ್ಷಕ್ಕೆ 12 ದಿನ ಋತುಚಕ್ರದ ರಜೆ ನೀಡಲಾಗುತ್ತೆ.
ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀತಿಯನ್ನು ಜಾರಿಗೆ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ಮಹಿಳೆಯರು ಅವರ ಅಗತ್ಯದ ದಿನಗಳಲ್ಲಿ ರಜೆ ತೆಗೆದುಕೊಳ್ಳಬಹುದು. ಸರಕಾರ ವಾರ್ಷಿಕ 12 ದಿನ ರಜೆ ಕೊಡುವ ನಿರ್ಧಾರವನ್ನು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಮಹಿಳೆಯರಿಗೂ ಅನ್ವಯ ಆಗಲಿದೆ. ಬೇರೆ ರಾಜ್ಯಗಳಲ್ಲಿ ಹೇಗೆ ಅನುಷ್ಠಾನವಾಗಿದೆ ಗೊತ್ತಿಲ್ಲ. ಕರ್ನಾಟಕಲ್ಲಿ ನಾವು ಅನುಷ್ಠಾನ ಮಾಡುತ್ತೇವೆ. ಎಲ್ಲ ವಲಯದಲ್ಲೂ ಅನ್ವಯವಾಗುತ್ತೆ. ಸರಕಾರಿ, ಖಾಸಗಿ ವಲಯದಲ್ಲೂ ಅನ್ವಯವಾಗಲಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಷಿನಿಗೌಡ ಈ ಬಗ್ಗೆ ಮಾತನಾಡಿ, ಇಂದು ಸರ್ಕಾರ ತೆಗೆದುಕೊಂಡ ತೀರ್ಮಾನ ಐತಿಹಾಸಿಕ ತೀರ್ಮಾನ. ಇದನ್ನು ನಾವು ಸ್ವಾಗತಿಸುತ್ತೆವೆ. ಇಡೀ ಮಹಿಳಾ ಸಮುದಾಯ ಸರ್ಕಾರದ ತೀರ್ಮಾನ ಸ್ವಾಗತಿಸಿದೆ. ಈ ನಿರ್ಧಾರವು ನಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ. ಋತುಚಕ್ರದ ರಜೆ ನೀತಿಗಾಗಿ ಬಹಳ ವರ್ಷಗಳಿಂದ ನಮ್ಮ ಸಂಘ ಹೋರಾಟ ಮಾಡಿತ್ತು. ಸದ್ಯ ನಮ್ಮ ಸಂಘಟನೆಯ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಿದ್ದಾರೆ.