Fake gold scam: ನಕಲಿ ಚಿನ್ನವನ್ನೇ ಅಸಲಿ ಎಂದು ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

ರಾಜರ ಕಾಲದ ಚಿನ್ನದ ಸರವೆಂದು ಮರುಳುಮಾಡಿ, ನಕಲಿ ಚಿನ್ನವನ್ನೇ ಅಸಲಿಯೆಂದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಡು ಬಳಿಯಿರುವ ಹಕ್ಕಿಪಿಕ್ಕಿ ಕಾಲೋನಿಯ ಜಿ.ರಾಜೇಶ್ (27), ಎಸ್.ಬನ್ನಿ (21), ಸಿ. ಸಂಪತ್ (35), ಎಸ್.ಕಲ್ಯಾಣ್ (25),ಬಾಯಕೊಂಡ ಅಲಿಯಾಸ್ ಪ್ರೇಮಕುಮಾರ್ (23) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 63 ಲಕ್ಷ ನಗದು, ಸುಮಾರು 8 ಕೆ.ಜಿ ನಕಲಿ ಚಿನ್ನ, ಕೃತ್ಯಕ್ಕೆ ಬಳಸಿದ ಕಾರು ಮತ್ತು 2 ಲಾಂಗ್ ಮಚ್ಚುಗಳನ್ನ ಹೊಸಕೋಟೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಹೊಸಕೋಟೆಯ ಚಿಂತಾಮಣಿ ರಸ್ತೆಯ ಬಳಿ ಬಳ್ಳಾರಿ ಮೂಲದ ಸಂತೋಷ ಎಂಬ ವ್ಯಕ್ತಿಗೆ ಅಸಲಿ ಚಿನ್ನ ಕೊಡುತ್ತೇವೆ ಎಂದು ಹೇಳಿದ ಆರೋಪಿಗಳು, ನಕಲಿ ಚಿನ್ನ ಕೊಟ್ಟು 15 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದುರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಮೊದಲಿಗೆ ಫೇಸ್‌ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್‌ ನಲ್ಲಿ ಫೋನ್ ನಂಬರ್‌ಗಳನ್ನು ಹುಡುಕುತ್ತಾರೆ. ಅದರಲ್ಲೂ ತೆಲುಗುಮಾತನಾಡುವವರ ಜೊತೆ ಮೊದಲೆ ಪರಿಚಯವಿದ್ದಂತೆ ಮಾತನಾಡಿ ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ನಾವು ಕೇರಳದಲ್ಲಿ ಜಮೀನುಗಳಲ್ಲಿ ಜೆಸಿಬಿ ವಾಹನದಲ್ಲಿ ಕೆಲಸ ಮಾಡುತ್ತಿದ್ದಾಗ, ರಾಜ ಮಹಾರಾಜರ ಕಾಲದ ಚಿನ್ನದ ಹಾರ ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಿ ಅವರಿಗೆ ವಿಡಿಯೋ ಮೂಲಕ ನಕಲಿ ಹಾರವನ್ನು ತೋರಿಸುತ್ತಾರೆ.

ಹಾರವನ್ನ ತೋರಿಸುವ ಮೊದಲು ಆ ಹಾರದ ತುದಿಗೆ ಅಸಲಿ ಚಿನ್ನದ ಗುಂಡುಗಳನ್ನು ಜೋಡಿಸಿರುತ್ತಾರೆ. ಅವರನ್ನು ನಂಬಿ ಹೋದ ವ್ಯಕ್ತಿಗಳಿಗೆ ಆ ಹಾರವನ್ನು ತೋರಿಸಿ, ಮೊದಲೇ ಪ್ಲಾನ್ ಮಾಡಿದಂತೆ ಜೋಡಿಸಿದ್ದ ಎರಡು ಅಸಲಿ ಚಿನ್ನದಗುಂಡುಗಳನ್ನು ಚೆಕ್ ಮಾಡಿಕೊಂಡು ಹಣ ತರುವಂತೆ ತಿಳಿಸುತ್ತಾರೆ. ಆಗ ಅಸಲಿ ಚಿನ್ನದ ಗುಂಡುಗಳನ್ನು ಪಡೆದುಕೊಂಡವ್ಯಕ್ತಿಗಳು ಅದನ್ನು ಪರಿಶೀಲಿಸಿಕೊಂಡು ಅದು ಅಸಲಿ ಆಗಿದ್ದರಿಂದ ನಂಬಿ, ಹಣ ರೆಡಿ ಮಾಡಿಕೊಳ್ಳುತ್ತಿದ್ದರು.

ಬಳಿಕ ಆರೋಪಿಗಳು ವಿಡಿಯೋ ಕಾಲ್ ಮಾಡಿ ಹಣ ಇರುವ ಬಗ್ಗೆ ಖಚಿತ ಪಡಿಸಿಕೊಂಡು ತಾವು ಹೇಳಿದ ಕಡೆ ಆ ವ್ಯಕ್ತಿಗಳನ್ನು ಕರೆಯಿಸಿಕೊಂಡು ನಕಲಿ ಚಿನ್ನದ ಹಾರವನ್ನು ಕೊಟ್ಟು ಇದೇ ರಾಜರ ಕಾಲದ ಚಿನ್ನದ ಹಾರವೆಂಬಂತೆ ನಂಬಿಸಿ ಹಣವನ್ನು ಪಡೆದುಕೊಂಡು ತಕ್ಷಣ ಅವರು ಬಂದಿದ್ದ ವಾಹನದಲ್ಲಿ ಪರಾರಿಯಾಗುತ್ತಿದ್ದರು.

ಈ ರೀತಿ ವಂಚಿಸಲು ಒಂದೊಂದು ದಿನ ಬೇರೆ ಬೇರೆ ಸ್ಥಳಗಳಿಗೆ ಕರೆಸಿಕೊಳ್ಳುತ್ತಿದ್ದರು. ಈ ವಂಚನೆಯ ಕೃತ್ಯಕ್ಕೆ ಬೇರೆ ಬೇರೆ ಹೆಸರಿನಲ್ಲಿ ಸಿಮ್ ಕಾರ್ಡನ್ನು ಖರೀದಿಸಿ, ಕೃತ್ಯಕ್ಕೆ ಉಪಯೋಗಿಸಿ ನಂತರ ಸಿಮ್ ಅನ್ನು ಮುರಿದು ಬಿಸಾಕಿ, ಬೇರೆ ಕೃತ್ಯಕ್ಕೆ ಹೊಸ ಸಿಮ್ ಕಾರ್ಡ್ ಖರೀದಿ ಮಾಡುತ್ತಿದ್ದರು.

ಈ ಮೊದಲೇ ಆರೋಪಿಗಳ ಮೇಲೆ ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ 4 ಪ್ರಕರಣಗಳು ದಾಖಲಾಗಿವೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ಶಿಡ್ಲಘಟ್ಟ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 7 ಪ್ರಕರಣಗಳಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

Rakesh arundi

Leave a Reply

Your email address will not be published. Required fields are marked *