Gadag: ಎರಡು ಕೋಮುಗಳ ನಡುವೆ ಬೆಂಕಿ ಹಚ್ಚಿದ ‘ಸಿಗರೇಟ್’..!

ಸಿಗರೇಟ್ ಬಾಕಿ ಹಣದ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣಗೆಯಲ್ಲಿ ನಡೆದಿದ್ದು, ಘರ್ಷಣೆಯಲ್ಲಿ ಆರು ಜನರು ಗಾಯಗೊಂಡಿದ್ದು, ಘರ್ಷಣೆ ಕೋಮು ಸ್ವರೂಪ ಪಡೆದುಕೊಂಡಿದೆ.

ಗಾಯಾಳುಗಳಾದ ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ, ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್ ಮತ್ತು ವಿರುಪಾಕ್ಷ ಹಿರೇಮಠ ಅವರಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಳಗೇರಿಯಲ್ಲಿ ಬೀಡಾ ಅಂಗಡಿ ನಡೆಸುತ್ತಿರುವ ಅಬ್ದುಲ್ ಘನಿ ಅವರಿಗೆ ದೇವಪ್ಪ ಪೂಜಾರ್ ಸಿಗರೇಟ್ ಮತ್ತು ಟೀಗಾಗಿ 2,500 ರೂ ಬಾಕಿ ಉಳಿಸಿಕೊಂಡಿದ್ದು, ಬಾಕಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಹಣ ನೀಡುವ ಬದಲಾಗಿ ದೇವಪ್ಪ ಪಕ್ಕದ ಅಂಗಡಿಗೆ ಹೋಗಿದ್ದಾನೆ. ಈ ವೇಳೆ ಘನಿ 2,500 ರೂ ಬಾಕಿ ಹಣ ನೀಡುವಂತಿ ಬೆದರಿಸಿದ್ದಾನೆ. ಬಾಕಿ ಮೊತ್ತ ಕೇವಲ 800 ರೂ. ಎಂದು ದೇವಪ್ಪ ವಾದಿಸಿದ್ದರಿಂದ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಘರ್ಷಣೆಗೆ ಆರಂಭವಾಗಿದೆ.

ಗಲಾಟೆಯಲ್ಲಿ ಗಾಯಗೊಂಡ ದೇವಪ್ಪ, ತನ್ನ ಸ್ನೇಹಿತರಿಗೆ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಅಬ್ದುಲ್ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ನಂತರ ವಾಗ್ವಾದ ಕೋಮು ಸ್ವರೂಪ ಪಡೆದುಕೊಂಡಿದೆ.

ದೇವಪ್ಪನ ಸ್ನೇಹಿತರು ಮೊದಲು ತಮ್ಮ ಮೇಲೆ ದಾಳಿ ಮಾಡಿ ಅಂಗಡಿಯನ್ನು ಧ್ವಂಸಗೊಳಿಸಿದರು ಎಂದು ಅಬ್ದುಲ್ ಪತ್ನಿ ಮುಮ್ತಾಜ್ ಹೇಳಿದ್ದಾರೆ. ಆದರೆ, ಯುವಕರು ಇದನ್ನು ನಿರಾಕರಿಸಿದ್ದಾರೆ, ಅಬ್ದುಲ್ ಗುಂಪು ಹಿಂದಿನಿಂದ ದಾಳಿ ಮಾಡಿದೆ ಎಂದು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ತಳಗೇರಿ ಬಡಾವಣೆಯಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿಯಿದ್ದು ಈಗ ಶಾಂತವಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Rakesh arundi

Leave a Reply

Your email address will not be published. Required fields are marked *