Nandini products: ಸೆ 22ರಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ
ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆ ಮಾಡಿದ ಬೆನ್ನಲ್ಲೇ, ಇದೀಗ ಕೆಎಂಎಫ್ ನಂದಿನಿ ಮೊಸರು, ತುಪ್ಪ, ಬೆಣ್ಣೆ, ಚೀಸ್ ಸೇರಿ ಹಲವು ಉತ್ಪನ್ನಗಳ ಬೆಲೆ ದರ ಇಳಿಕೆಗೆ ಮುಂದಾಗಿದೆ. ಆದರೆ ಈ ಬಗ್ಗೆ ಕೆಎಂಎಫ್ ಅಧಿಕೃತ ಆದೇಶ ಹೊರಡಿಸುವುದು ಬಾಕಿಯಿದೆ.
ಕೇಂದ್ರ ಸರ್ಕಾರ ಸೆ.22ರಿಂದ ಅನ್ವಯವಾಗುವಂತೆ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದೆ. ಇದರಿಂದ ನಂದಿನಿಯ ಕೆಲ ಉತ್ಪನ್ನಗಳ ದರ ಕಡಿಮೆಯಾಗಲಿದೆ. ದರ ಇಳಿಕೆ ಬಗ್ಗೆ ಶುಕ್ರವಾರ ಕೆಎಂಎಫ್ ಅಧಿಕಾರಿಗಳು ಸಭೆ ಮಾಡಿದ್ದಾರೆ. ಸಭೆಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ನಿರ್ಧರಿಸಲಾಗಿದೆ. ಮೊಸರಿನ ದರ ಲೀಟರ್‌ಗೆ 4 ರೂ. ಇಳಿಕೆ ನಿರೀಕ್ಷೆ ಇದೆ. ಜೊತೆಗೆ ತುಪ್ಪ, ಬೆಣ್ಣೆ, ಲಸ್ಸಿ ,ಚೀಸ್ ಸೇರಿ ಹಲವು ಉತ್ಪನ್ನಗಳ ದರ ಕೂಡ ಇಳಿಕೆಯಾಗಿದೆ.
ಪನ್ನೀರ್ ಮತ್ತು ಗುಡ್ ಲೈಫ್ ಹಾಲಿಗೆ ವಿಧಿಸುತ್ತಿದ್ದ ಜಿಎಸ್‌ಟಿಯು ಶೇ. 5ರಷ್ಟಿತ್ತು. ಇದೀಗ ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತುಪ್ಪ, ಬೆಣ್ಣೆ, ಚೀಸ್, ಪನ್ನೀರ್ ಹಾಗೂ ಇತರೆ ಕುರಕಲು ತಿಂಡಿಗಳ ಜಿಎಸ್‌ಟಿ ದರವು ಶೇ. 12 ರಿಂದ ಶೇ. 5ಕ್ಕೆ ಇಳಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ಈ ಉತ್ಪನ್ನಗಳ ಬೆಲೆಯೂ ಕಡಿಮೆಯಾಗಲಿದೆ.
ಕುಕ್ಕೀಸ್, ಚಾಕೋಲೆಟ್, ಐಸ್‌ಕ್ರೀಂ, ನೀರಿನ ಉತ್ಪನ್ನಗಳಿಗೆ ವಿಧಿಸುತ್ತಿದ್ದ ಜಿಎಸ್‌ಟಿ ಶೇ.18ರಷ್ಟಿತ್ತು. ಇದೀಗ ಈ ಉತ್ಪನ್ನಗಳ ಜಿಎಸ್‌ಟಿ ದರವನ್ನು ಶೇ.5ಕ್ಕೆ ಇಳಿಕೆಯಾಗಲಿದೆ. ಆದರೆ, ಕಾರ್ಬೋನೇಟೆಡ್ ಪಾನಿಯಗಳ ಮೇಲಿನ ಜಿಎಸ್‌ಟಿ ಹಾಲಿ ಶೇ.28ರಷ್ಟಿದ್ದು, ಶೇ.40ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ದರ ಸೆ. 22ರಿಂದಲೇ ಜಾರಿಗೆ ಬರಲಿದೆ.
2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. 2022ರಲ್ಲಿ ಜಿಎಸ್‌ಟಿಯನ್ನು ಶೇ.12ಕ್ಕೆ ಹೆಚ್ಚಿಸಲಾಗಿತ್ತು. ಈಗ ಕೇಂದ್ರ ಸರ್ಕಾರ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಹಾಲಿನ ಉತ್ಪನ್ನಗಳ ದರವೂ ಇಳಿಕೆಯಾಗಲಿದ್ದು ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಹೊರೆ ಕಡಿಮೆಯಾಗಲಿದೆ.