Babri Masjid: ಬಾಬ್ರಿ ಮಸೀದಿ ನಿರ್ಮಾಣವೇ ಮೂಲಭೂತವಾಗಿ ಅಪವಿತ್ರ ಕ್ರಿಯೆ: ಡಿ.ವೈ.ಚಂದ್ರಚೂಡ್
“ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣವೇ ಒಂದು ಬಗೆಯಲ್ಲಿ ಮೂಲಭೂತವಾಗಿ ಅಪವಿತ್ರಗೊಳಿಸುವ ಕ್ರಿಯೆಯಾಗಿತ್ತು,” ಎಂದು ನಿವೃತ್ತ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ನೀಡಿದ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.
ಕೆಲದಿನಗಳ ಹಿಂದೆ ಪತ್ರಕರ್ತ ರೊಬ್ಬರ ನ್ಯೂಸ್ ಪೋರ್ಟಲ್ಗೆ ನೀಡಿದ ಸಂದರ್ಶನದಲ್ಲಿ ಚಂದ್ರಚೂಡ್ ಅವರು, ”ಹಿಂದಿದ್ದ ದೇವಸ್ಥಾನದ ಸಂರಚನೆಯ ಕಟ್ಟಡ ಕೆಡವಿ ಆ ಸ್ಥಳದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಯಿತು ಎಂದು ಸೂಚಿಸಲು ಯಾವುದೇ ಪುರಾತತ್ವ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಬಾಬ್ರಿ ಮಸೀದಿ ನಿರ್ಮಾಣವೇ ಮೂಲಭೂತವಾಗಿ ಅಪವಿತ್ರಗೊಳಿಸುವ ಕ್ರಿಯೆ ಯಾಗಿತ್ತು,” ಎಂಬ ಅಭಿಪ್ರಾಯ ಹೊರಹಾಕಿದ್ದರು. ಅವರ ಈ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗಿದೆ.
ಖಾಸಗಿ ಸುದ್ದಿ ವಾಹಿನಿಯೊಂದರ ಕಾಠ್ಯಕ್ರಮದಲ್ಲಿ ಮಾತನಾಡಿದ ಚಂದ್ರಚೂಡ್ ಅವರು ತಮ್ಮ ಈ ಹೇಳಿಕೆ ಪ್ರಸ್ತಾಪಿಸಿ, ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣವನ್ನು ನಂಬಿಕೆಯ ಆಧಾರದ ಮೇಲೆ ಕೋರ್ಟ್ ಇತ್ಯರ್ಥಪಡಿಸಿಲ್ಲ. ಬದಲಿಗೆ, ಕಾನೂನು ತತ್ವಗಳು ಮತ್ತು ಸಾಕ್ಷ್ಯಾಧಾರಗಳನ್ನು ಆಧರಿಸಿ ಇತ್ಯರ್ಥಪಡಿಸಿತು ಎಂದು ಹೇಳಿದರು.
ಅಲ್ಲದೇ, ನ್ಯೂಸ್ ಪೋರ್ಟಲ್ಗೆ ನೀಡಿದ ಸಂದರ್ಶನದಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತಮ್ಮ ಮೂಗಿನ ನೇರಕ್ಕೆ ಕೆಲವೇ ಕೆಲವು ಅಂಶಗಳನ್ನು ಮುಂದಿಟ್ಟುಕೊಂಡು ವ್ಯಾಖ್ಯಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಕೇಸ್ ರೆಕಾರ್ಡ್ 30,000 ಪುಟಗಳಿಗಿಂತ ಹೆಚ್ಚು ಇದ್ದ ಕಾರಣ ತೀರ್ಪು ಕೂಡ 1,045 ಪುಟದಷ್ಟು ಸುದೀರ್ಘವಾಯಿತು. ನನ್ನ ಈ ಹೇಳಿಕೆಯನ್ನು ಟೀಕಿಸುವ ಬಹುತೇಕ ಜನರು ತೀರ್ಪನ್ನು ಪೂರ್ತಿಯಾಗಿ ಓದಿಲ್ಲ. ಪೂರ್ಣ ದಾಖಲೆ ಪರಿಶೀಲಿಸದೇ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಗಳನ್ನು ಪೋಸ್ಟ್ ಮಾಡುವುದು ಬಹಳ ಸುಲಭ ಎಂದು ಕುಟುಕಿದರು.
ರಾಮ ಜನ್ಮಭೂಮಿ-ಬಾಬ್ರಿ ಕೇಸ್ ಕುರಿತು 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಪಂಚ ನ್ಯಾಯಮೂರ್ತಿಗಳ ಪೀಠದಲ್ಲಿ ಡಿ. ವೈ. ಚಂದ್ರಚೂಡ್ ಕೂಡ ಒಬ್ಬರಾಗಿ ಕಾರನಿರ್ವಹಿಸಿದ್ದರು.