Bengaluru: ಬಿಗ್ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್: ಯುವತಿಗೆ ಗಂಭೀರ ಗಾಯ
ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಯುವತಿಯೊಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ.
ಅ.4ರ ರಾತ್ರಿ 1:30ಕ್ಕೆ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತ ಬಳಿಕ ದಿವ್ಯಾ ಸುರೇಶ್ ಪರಾರಿಯಾಗಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅ.7 ರಂದು ಗಾಯಗೊಂಡ ಯುವತಿಯ ಸಂಬಂಧಿ ಕಿರಣ್ ನಟಿ ವಿರುದ್ಧ ದೂರು ದಾಖಲಿಸಿದ್ದಾರೆ.
ಕಿರಣ್ ಸಂಬಂಧಿ ಅನುಷಾಗೆ ಹುಷಾರಿರಲಿಲ್ಲ. ಹೀಗಾಗಿ ಅವತ್ತು ರಾತ್ರಿ ಗಿರಿನಗರದ ಆಸ್ಪತ್ರೆಗೆ ಹೋಗುತ್ತಿದ್ದರು. ಬೈಕ್ನಲ್ಲಿ ಮಧ್ಯೆ ಅನುಷಾ ಕುತಿದ್ದರು. ಕಿರಣ್ ಬೈಕ್ ಓಡಿಸುತ್ತಾ ಇದ್ದರು, ಅನಿತಾ ಬೈಕ್ ಹಿಂದೆ ಕುಳಿತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ನಾಯಿಗಳು ಬೊಗಳಿವೆ. ಭಯದಿಂದ ಕಿರಣ್ ಬೈಕ್ನಲ್ಲಿ ಸ್ವಲ್ಪ ಬಲ ಬದಿಗೆ ಹೋಗಿದ್ದಾರೆ. ಈ ವೇಳೆ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಬಂದ ದಿವ್ಯಾ, ಬೈಕ್ಗೆ ಡಿಕ್ಕಿ ಹೊಡೆದು ಹಾಗೇ ಪರಾರಿಯಾಗಿದ್ದಾರೆ.
ಕಾರು ಡಿಕ್ಕಿ ಹೊಡೆದಾಗ ಯುವತಿಗೆ ಕಾಲಿನ ಮಂಡಿಗೆ ಪೆಟ್ಟಾಗಿತ್ತು. ಗಾಯಳು ಯುವತಿಯನ್ನು ಕೂಡಲೇ ಅಶ್ವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿರೋದಾಗಿ ಚಿಕಿತ್ಸೆ ನೀಡಿದ್ದಾರೆ. ನಂತರ ಕಿರಣ್ ದೂರು ನೀಡಿದ್ದಾರೆ.
ಸಂಚಾರಿ ಪೊಲೀಸರು ಸಿಸಿಟಿವಿ ಮೂಲಕ ಕಾರು ನಂಬರ್ ಟ್ರೇಸ್ ಮಾಡಿದ್ದಾಗ ದಿವ್ಯಾ ಸುರೇಶ್ ಎಂದು ಗೊತ್ತಾಗಿದೆ. ದಿವ್ಯಾ ಸುರೇಶ್ ಕಾರು ಪತ್ತೆ ಮಾಡಿ ಪೊಲೀಸರು ಸೀಜ್ ಮಾಡಿದ್ದರು. ಬಳಿಕ ದಿವ್ಯಾ ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದ ತನಿಖೆ ಈಗಲೂ ನಡೆಯುತ್ತಿದೆ.