Dharwada: ಖಾಲಿ ಹುದ್ದೆಗಳ ನೇಮಕಾತಿಗೆ ಆಗ್ರಹ: ರೊಚ್ಚಿಗೆದ್ದ ವಿದ್ಯಾರ್ಥಿಗಳು
ಪ್ರತಿನಿತ್ಯ ಧರ್ಮಸ್ಥಳ ಪ್ರಕರಣದ ಬಗ್ಗೆ ನಮ್ಮ ವಿರೋಧ ಪಕ್ಷಗಳು ಇಂಟ್ರೆಸ್ಟ್ ತೋರಿಸಿದಷ್ಟು, ನಮ್ಮ ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಗಳೇ ಆಗ್ತಿಲ್ಲವಲ್ಲಾ, ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಆಗ್ತಿಲ್ಲವಲ್ಲಾ ಅನ್ನೋ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡ್ತಿದೆ. ಒಂದೇ ಒಂದು ನೋಟಿಫಿಕೇಷನ್ ಸೇರಿದಂತೆ ರೆಕ್ರೂಟ್‌ಮೆಂಟ್‌ಗಾಳಾಗಿಲ್ಲ ಅನ್ನೋ ನೋವು ಆಕ್ರೋಶ ರಾಜ್ಯದ ಜನತೆಗೆ ಇದೆ. ಈ ಎಲ್ಲಾ ಕಾರಣಗಳಿಂದ ಝೆನ್‌ಝಡ್ ಸಮುದಾಯದ ಆಕ್ರೋಶಕ್ಕೆ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ.
ಧಾರವಾಡದಲ್ಲಿ ನಡೆದ ಹೋರಾಟ ಮುಂದೆ ಓದೋ ಹುಡುಗರ ಕನಸುಗಳಿಗೆ ಕೊಳ್ಳಿ ಇಟ್ಟರೆ ಯಾವ ಪರಿಣಾಮಗಳನ್ನು ಎದುರಿಸಬೇಕಾದೀತು ಅನ್ನೋ ಆತಂಕ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಭವಿಷ್ಯದ ಯುವಸಮುದಾಯವನ್ನು ಕಡೆಗಣಿಸಿದ್ರೆ ನೇಪಾಳ, ಶ್ರೀಲಂಕಾ, ಫಿಲಿಫ್ಫೈನ್ಸ್‌ನಲ್ಲಿ ನಡೆದಂತ ಘಟನೆಗಳೇ ನಮ್ಮ ರಾಜ್ಯದಲ್ಲಿ ನಡೆದ್ರೂ ಅಚ್ಚರಿ ಏನಿಲ್ಲ.
ವಿದ್ಯಾಕಾಶಿ, ಶಿಕ್ಷಣಕಾಶಿ ಎಂದೇ ಕರೆಸಿಕೊಳ್ಳೋ ಧಾರವಾಡ ಜಿಲ್ಲೆಯಲ್ಲಿ ಉದ್ಯೋಗ ನೇಮಕಾತಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಸಿಡಿದೆದ್ದಿದ್ದರು. ವಿದ್ಯಾರ್ಥಿಗಳ ಈ ಆಕ್ರೋಶ, ಕೋಪಾಗ್ನಿಜ್ವಾಲೆ ಮುಂದೆ ಬೇರೆ ರೀತಿ ತಿರುಗಿಕೊಂಡ್ರು ಆಶ್ಚರ್ಯವಿಲ್ಲ. ಯಾಕೆಂದ್ರೆ, ಈ ಮಟ್ಟಿಗೆ ಬಂಡೆದ್ದಿರೋ ವಿದ್ಯಾರ್ಥಿಗಳ ಸಿಟ್ಟಿನ ಹಿಂದೆ ಒಂದು ಅರ್ಥವೂ ಇದೆ. ವಸುದೈವಕುಟುಂಬಕಂ ಸತ್ವ ಸಾರಬೇಕಾದ ಸ್ವಾಮೀಜಿಗಳೆಲ್ಲಾ ತಮ್ಮ ತಮ್ಮ ಜಾತಿಯ ಮೀಸಲಾತಿಗಾಗಿ ಹೋರಾಡ್ತಿದ್ದಾರೆ.
ತಮ್ಮ ಜಾತಿಬೆಂಬಲ ಗಿಟ್ಟಿಸಲು ಧರ್ಮಗುರುಗಳೇ ಜಾತಿ ರಾಜಕೀಯ ಮಾಡ್ತಿದ್ದಾರೆ. ಇತ್ತ ವಿರೋಧ ಪಕ್ಷಗಳು ಜಾತಿ ರಾಜಕೀಯ, ಧರ್ಮದ ಹೆಸ್ರಲ್ಲಿ ರಾಜಕೀಯ ಮಾಡ್ತಾ ತಮ್ಮ ಬೇಳೆ ಬೇಯಿಸಿಕೊಳ್ತಾ ಜನ್ರನ್ನು ಮೂರ್ಖರನ್ನಾಗಿ ಮಾಡ್ತಿದ್ದಾರೆ. ಇತ್ತ ಸರ್ಕಾರ ಕೂಡ ವೋಟ್ ಬ್ಯಾಂಕ್‌ಗೋಸ್ಕರ ಫ್ರೀ ಸ್ಕೀಮ್ ತಂದು ಭವಿಷ್ಯದ ವಿದ್ಯಾರ್ಥಿಗಳ ಕನಸಿಗೆ ತಣ್ಣೀರೆರಚಿದೆ. ಸಮೀಕ್ಷೆ ಹೆಸ್ರಲ್ಲಿ ಶಿಕ್ಷಕರನ್ನು ಪುಗಸಟ್ಟೆ ದುಡಿಸಿಕೊಳ್ತಿರೋ ಸರ್ಕಾರದ ವಿರುದ್ಧ ನೌಕರರು ರೊಚ್ಚಿಗೇಳೋ ಕಾಲ ದೂರ ಇಲ್ಲ. ಇನ್ನು, ವಿದ್ಯಾರ್ಥಿಗಳು ಕೂಡ ಬಂಡೆದ್ದು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ.
ವಯೋಮಿತಿ ಹೆಚ್ಚಳ ಮಾಡಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದಿಂದ ಸಾವಿರಾರು ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದಾರೆ. ರಾಜ್ಯ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಸರ್ಕಾರ ನೇಮಕಾತಿ ಮಾಡಿಕೊಂಡು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.
ಅಸಲಿಗೆ ಅನೇಕರು ಈ ವಿಷ್ಯವನ್ನು ನಿರ್ಲ್ಯಕ್ಷ ಮಾಡಬಹುದು. ಆದ್ರೆ, ಅನೇಕ ವಿದ್ಯಾರ್ಥಿಗಳು ಸರ್ಕಾರಿ ನೌಕರಿ ಗಿಟ್ಟಿಸೋ ಸಲುವಾಗಿ ಮದ್ವೆಯನ್ನು ಮುಂದೂಡ್ತಾ ಬರ್ತಿದ್ದಾರೆ. ಇತ್ತ ನೌಕರಿಯೂ ಇಲ್ಲದೇ ವಯಸ್ಸು ಮುಂದೋಗ್ತಾ ಇದ್ದರೇ ಭವಿಷ್ಯದಲ್ಲಿ ಖಿನ್ನತೆಗೆ ಜಾರುವ ಯುವಕರು ನಿರ್ಲ್ಯಜ್ಜ ಸರ್ಕಾರಗಳ ವಿರುದ್ಧ, ಭ್ರಷ್ಟ ಸರ್ಕಾರಗಳ ವಿರುದ್ಧ ದಂಗೆ ಏಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಪಿಎಸ್‌ಐ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅನೇಕ ವರ್ಷಗಳಿಂದ ಭರ್ತಿ ಮಾಡಿಕೊಂಡಿಲ್ಲ. ಕೂಡಲೇ ರಾಜ್ಯ ಸರ್ಕಾರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು ಮತ್ತು ವಯೋಮಿತಿ ಹೆಚ್ಚಿಸುವಂತೆ ಆಗ್ರಹಿಸುತ್ತಲೇ ವಯೋಮಿತಿ ಹೆಚ್ಚಳ ಮಾಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಅಧ್ಯಕ್ಷ ಕಾಂತಕುಮಾರ ಮೂಂದಾಳತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಧಗಧಗಿಸಿದ ಜ್ಯುಬಿಲಿ ಸರ್ಕಲ್..! ಡೋಂಟ್‌ಕೇರ್ ಎಂದ ವಿದ್ಯಾರ್ಥಿಗಳು
ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಉದ್ಯೋಗಾಕಾಂಕ್ಷಿಗಳು ದೊಡ್ಡ ಪ್ರಮಾಣದಲ್ಲಿ ಸೇರಿ ವೃತ್ತ ಸಂಪೂರ್ಣ ಬಂದ್ ಮಾಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರ ಭಾವಚಿತ್ರ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಜ್ಯುಬಿಲಿ ವೃತ್ತದಲ್ಲಿ ವಿವಿಧ ಕಾಂಗ್ರೆಸ್ ನಾಯಕರು ಹಬ್ಬದ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್‌ಗಳನ್ನೂ ಕಿತ್ತು ಕಿತ್ತು ಹಾಕಿ ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಹ ಭೇಟಿ ನೀಡಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕ್ಷಿಗಳಿಗೆ ಮನವೊಲಿಸಲು ಯತ್ನಿಸಿರುವ ಘಟನೆ ನಡೆಯಿತು. ಜ್ಯುಬಿಲಿ ವೃತ್ತದಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಸಂಚಾರ ದಟ್ಟನೆ ಉಂಟಾಗಿತ್ತು.
ರಾಜ್ಯ ಆರ್ಥಿಕ ಇಲಾಖೆಯಲ್ಲಿ 9,536 ಹುದ್ದೆಗಳು ಸೇರಿದಂತೆ ಎಲ್ಲಇಲಾಖೆಗಳಲ್ಲೂ ಹುದ್ದೆಗಳು ಖಾಲಿ ಇವೆ. ಪೊಲೀಸ್ ನೇಮಕಾತಿ ಹೆಚ್ಚಿಸದ ಕಾರಣ ನೌಕರಿ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳೂ ಇವೆ. ಉನ್ನತ ಶಿಕ್ಷಣ ಇಲಾಖೆ ನೇಮಕಾತಿ ವಿಚಾರವಾಗಿ ಸಚಿವರು ನ್ಯಾಯಾಲಯದ ಆದೇಶವನ್ನೂ ಪಾಲಿಸುತ್ತಿಲ್ಲ. ಶಿಕ್ಷಣ ಸಚಿವರು ಸುಳ್ಳು ಹೇಳುತ್ತ ಹೊರಟಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪರ್ಧಾರ್ಥಿಗಳ ಅನ್ಯಾಯದ ಭಾಗೀದಾರರಾಗಿದ್ದಾರೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನೆಗೆ ನೇಪಾಳ ಹೋರಾಟದ ಟಚ್ ನೀಡುವ ಪ್ರಯತ್ನವೂ ನಡೆಯಿತು. ಇದಕ್ಕೆ ಪೂರಕವೆಂಬಂತೆ ಜೆನ್-ಝೆಡ್ ಬ್ಯಾನರ್‌ನ್ನು ಧಾರವಾಡದಲ್ಲಿಯೂ ಪ್ರತಿಭಟನಾಕಾರರು ಪ್ರದರ್ಶಿಸಿದರು. ನೇಪಾಳದಲ್ಲಿನಡೆದ ದಂಗೆಗೆ ಜೆನ್-ಝೆಡ್ ವರ್ಗದವರೇ ರೂವಾರಿ. ಸರ್ಕಾರ ನಿರ್ಲಕ್ಷ ತೋರಿದರೆ ಕರ್ನಾಟಕದಲ್ಲಿಯೂ ಅದೇ ರೀತಿಯ ಹೋರಾಟ ನಡೆದೀತು ಎಂಬ ಎಚ್ಚರಿಕೆಯ ಸಂದೇಶವನ್ನು ವಿದ್ಯಾರ್ಥಿಗಳು ಈ ಮೂಲಕ ರವಾನಿಸಿದ್ದಾರೆ.
–