Dharmasthala: ಧರ್ಮಸ್ಥಳ ಪ್ರಕರಣ: ಕೋರ್ಟ್ ನಲ್ಲಿ ಚಿನ್ನಯ್ಯನ ಹೇಳಿಕೆ ಅಂತ್ಯ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆಂದು ಹೇಳಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನ ಪ್ರಕರಣದಲ್ಲಿ ಆತನ ಹೇಳಿಕೆ ನೀಡುವ ಕಾರ್ಯ ಶನಿವಾರ ಪೂರ್ಣಗೊಂಡಿದೆ. ಬೆಳ್ತಂಗಡಿ ಕೋರ್ಟ್ ಗೆ ಸೆ.27 ರಂದು ಬೆಳಗ್ಗೆ ಶಿವಮೊಗ್ಗ ಪೊಲೀಸರು ಕರೆದುಕೊಂಡು ಬಂದಿದ್ದರು.

ಬೆಳ್ತಂಗಡಿ 11:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹೇಳಿಕೆ ನೀಡಿದ್ದು, ಊಟದ ಬಳಿಕ ಮತ್ತೆ 2:45 ರಿಂದ 4:30 ಗಂಟೆಯವರೆಗೆ ನ್ಯಾಯಾಧೀಶರ ಮುಂದೆ BNSS 183 ಹೇಳಿಕೆ ನೀಡಿದ್ದಾನೆ.

ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾದ ಚಿನ್ನಯ್ಯನ್ನು ಎಸ್.ಐ.ಟಿ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ವೇಳೆ ಚಿನ್ನಯ್ಯ ತಾನು ಆರಂಭದಲ್ಲಿ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಗೆ ಬದ್ಧನಾಗಿಲ್ಲ ಎಂದೂ ಹೊಸ ಹೇಳಿಕೆ ನೀಡುವುದಾಗಿಯೂ ಕೇಳಿಕೊಂಡಿದ್ದ. ಅದರಂತೆ ಆತನ ಹೇಳಿಕೆ ದಾಖಲಿಸಲು ದಿನ ನಿಗಧಿಪಡಿಸಲಾಗಿತ್ತು.

ಸೆ.23ರಂದು ಆತ ಹೇಳಿಕೆ ನೀಡಲು ಆರಂಭಿಸಿದ್ದ. ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೆ.25ರಂದು ಹಾಗೂ ಸೆ27ರಂದು ಹೀಗೆ ಮೂರು ದಿನಗಳ ಕಾಲ ಆತನ ಹೇಳಿಕೆ ದಾಖಲಿಸುವ ಕಾರ್ಯ ನಡೆದಿತ್ತು. ಹೇಳಿಕೆ ದಾಖಲಿಸುವಾಗ ನ್ಯಾಯಾಧೀಶರು ಮತ್ತು ಸಾಕ್ಷಿ ದೂರುದಾರನ ಹೊರತಾಗಿ ಬೇರೆ ಯಾರಿಗೂ ಕೊಠಡಿಗೆ ಪ್ರವೇಶಾವಕಾಶ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಶನಿವಾರ ಸಂಜೆಯ ವೇಳೆಗೆ ಆತನ ಹೇಳಿಕೆ ಪೂರ್ಣಗೊಂಡಿದ್ದು ಆತನನ್ನು ಬಿಗಿ ಭದ್ರತೆಯಲ್ಲಿ ಮರಳಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ. ಇದೀಗ ಈತನ ಹೇಳಿಕೆಯ ದಾಖಲೆಗಳು ಎಸ್.ಐ.ಟಿ ಅಧಿಕಾರಿಗಳ ಕೈ ಸೇರಿದ್ದು ಈ ಬಗ್ಗೆ ತನಿಖೆ ಆರಂಭಿಸಲಿದ್ದಾರೆ.

Rakesh arundi

Leave a Reply

Your email address will not be published. Required fields are marked *