Dharmasthala: ಬೆಂಕಿಯಲ್ಲಿ ಬೆಂದಷ್ಟು ಧರ್ಮಸ್ಥಳ ಪ್ರಕಾಶಮಾನವಾಗಲಿದೆ: ವೀರೇಂದ್ರ ಹೆಗ್ಗಡೆ.
ಧರ್ಮಸ್ಥಳದಲ್ಲಿ ಕೇಳಿಬರ್ತಿರೋ ಸರಣಿ ಶವಗಳ ಆರೋಪದ ವಿರುದ್ಧ ಪದೇ ಪದೇ ವೀರೇಂದ್ರ ಹೆಗಡೆ ಮೌನ ಮುರಿದು ಮಾತನಾಡ್ತಿದ್ದಾರೆ. ಚಿನ್ನಯ್ಯನ ಆರೋಪಗಳ ವಿರುದ್ಧ ತುಟಿ ಬಿಚ್ಚಿ ಮಾತನಾಡ್ತಿದ್ದಾರೆ. ಷಡ್ಯಂತ್ರಗಳ ವಿರುದ್ಧ ತಮ್ಮ ನಿಲುವು ಏನು ಅನ್ನೋದನ್ನು ಸ್ಪಷ್ಟಪಡಿಸ್ತಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಸತ್ಯ ದರ್ಶನ ಸಮಾವೇಶದಲ್ಲಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಭಕ್ತರಿಗೆ ಸಂದೇಶ ನೀಡಿದ್ದಲ್ಲದೇ ಅಂತರಂಗದ ಮಾತಗಳನ್ನು ಹೊರಹಾಕಿದ್ದಾರೆ.
ನೀವೆಲ್ಲರೂ ನಮ್ಮ ಕುಟುಂಬದ ಸದಸ್ಯರಂತೆ. ನಾನು ತಮಿಳುನಾಡಿನಲ್ಲಿ ಒಂದು ಹೋಮ ವೀಕ್ಷಿಸಿದ್ದೆ, ಆದರೆ ಇಷ್ಟು ದೊಡ್ಡ ಹೋಮವನ್ನು ಇಂದು ಇಲ್ಲಿ ನೋಡುತ್ತಿದ್ದೇನೆ. ಇದರಿಂದ ತುಂಬಾ ಸಂತೋಷವಾಗಿದೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ. ಹೋಮದ ಫಲವಾಗಿ ಉತ್ತಮ ಮಳೆ ಬೆಳೆಯಾಗುತ್ತಿದೆ, ದೇವರು ಕೂಡ ಸಂತೃಪ್ತರಾಗಿದ್ದಾರೆ ಎಂದು ಮತ್ತೆ ಮಾತು ಮುಂದುವರೆಸಿದ ಹೆಗಡೆ “ಸತ್ಯ ದರ್ಶನ ಈಗಾಗಲೇ ನಡೆಯುತ್ತಿದೆ. ನೀವು ನಿಮ್ಮ ಬಗ್ಗೆ ಪ್ರಾರ್ಥನೆ ಮಾಡಿಕೊಳ್ಳಿ. ನನಗಾಗಿ ಪ್ರಾರ್ಥನೆ ಮಾಡುವ ಅಗತ್ಯವಿಲ್ಲ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ನನ್ನ ಹಾರೈಕೆ” ಎಂದು ಮನವಿ ಮಾಡಿದ್ದಾರೆ.
ಎಸ್ಐಟಿ ತನಿಖೆಗೆ ಕೃತಜ್ಞತೆ ಸಲ್ಲಿಸಿದ ವೀರೇಂದ್ರ ಹೆಗಡೆ
ಕ್ಷೇತ್ರವನ್ನು ಮುಚ್ಚಬೇಕು, ಜನ ಇಲ್ಲಿಗೆ ಬರಬಾರದು ಎಂಬ ಉದ್ದೇಶದಿಂದ ಕೆಲವು ಷಡ್ಯಂತ್ರಗಳು ನಡೆದಿದ್ದರೂ, ಭಕ್ತರು ತಮ್ಮ ಭಕ್ತಿಯಿಂದ ಬರುತ್ತಾರೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಚಿನ್ನವನ್ನು ಬೆಂಕಿಗೆ ಹಾಕಿದರೆ ಅದು ಇನ್ನಷ್ಟು ಕಂಗೊಳಿಸುವಂತೆ, ಧರ್ಮಸ್ಥಳವೂ ಈ ಸವಾಲಿನ ನಡುವೆ ಇನ್ನಷ್ಟು ಬೆಳಗುತ್ತಿದೆ ಎಂದು ಹೆಗ್ಗಡೆ ಹೇಳಿದ್ದಾರೆ.