Dharmasthala Case: ಬುರುಡೆ ಕೇಸ್ ತನಿಖೆ ವೇಳೆ ತುಮಕೂರು ಯುವಕನ ಡಿಎಲ್ ಪತ್ತೆ..!
ಧರ್ಮಸ್ಥಳ ‘ಬುರುಡೆ’ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಮೊನ್ನೆ ಕೊಡಗು ಮೂಲದ ಯು.ಬಿ ಅಯ್ಯಪ್ಪರ ಐಡಿ ಪತ್ತೆಯಾಗಿತ್ತು. ಅದೇ ರೀತಿ ಈಗ ತುಮಕೂರು ಮೂಲದ ಯುವಕನ ಡಿಎಲ್ ಸಿಕ್ಕಿದೆ.
ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ತಂಡ ನಡೆಸಿದ ಎರಡನೇ ಹಂತದ ಶೋಧ ಕಾರ್ಯ ಸಂದರ್ಭದಲ್ಲಿ ಇನ್ನೊಂದು ಅಸ್ತಿಪಂಜರ ಪತ್ತೆಯಾಗಿದ್ದು, ಆ ಅಸ್ಥಿಪಂಜರ ತುಮಕೂರು ಜಿಲ್ಲೆಯ ಗುಬ್ಬಿ ನಿವಾಸಿ ಆದಿಶೇಷ ನಾರಾಯಣ ಅವರದ್ದು ಎಂದು ಶಂಕಿಸಲಾಗಿದೆ.
ಶೋಧ ಕಾರ್ಯ ಸಂದರ್ಭದಲ್ಲಿ ಆದಿಶೇಷ ನಾರಾಯಣರ ಡಿಎಲ್ ಪತ್ತೆಯಾಗಿದ್ದ ಹಿನ್ನಲೆಯಲ್ಲಿ ಕುಟುಂಬ ಸದಸ್ಯರನ್ನು ಎಸ್ಐಟಿ ತಂಡ ಸಂಪರ್ಕ ಮಾಡಿತ್ತು. ಕಛೇರಿಗೆ ಆಗಮಿಸಿದ ಆದಿಶೇಷ ನಾರಾಯಣರ ಕುಟುಂಬದ ಇಬ್ಬರು ಅಕ್ಕ ಮತ್ತು ಬಾವರಿಂದ ಮಾಹಿತಿ ಪಡೆದುಕೊಂಡು ಫೋಟೋ ಮತ್ತು ಡಿಎಲ್ ಆದಿಶೇಷ ನಾರಾಯಣರದ್ದೇ ಎಂದು ಕುಟುಂಬಸ್ಥರು ದೃಢ ಪಡಿಸಿದ್ದಾರೆ ಎನ್ನಲಾಗಿದೆ.
ಗ್ರಾಮದ ಬೋಜಯ್ಯ ಮತ್ತು ಚೆನ್ನಮ್ಮ ಎಂಬುವರ ಪುತ್ರ ಆದಿಶೇಷ ನಾರಾಯಣ 12 ರಿಂದ 15 ವರ್ಷದ ಹಿಂದೆ ನಾಪತ್ತೆಯಾಗಿದ್ದ. ಇವನಿಗೆ ಇಬ್ಬರು ಅಕ್ಕಂದಿರು ಇದ್ದಾರೆ. ಬೆಂಗಳೂರಿನ ಶೇಖರ್ ಬಾರ್ನಲ್ಲಿ ಕೆಲಸ ಮಾಡ್ತಿದ್ದ ಆದಿಶೇಷ, 2013 ಅಕ್ಟೋಬರ್ 2 ರಂದು ಸ್ನೇಹಿತರ ಜೊತೆ ಮನೆಗೆ ಬಂದು ಹೋಗಿದ್ದವನು ಮತ್ತೆ ವಾಪಾಸ್ ಬರಲೇ ಇಲ್ಲ. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಗೂ ದೂರು ನೀಡಿದ್ದರು.
ಎಸ್ಐಟಿ ತಂಡಕ್ಕೆ ಸಿಕ್ಕಿರುವ ಡಿಎಲ್ ನನ್ನ ತಮ್ಮನದ್ದೇ ಎಂದು ಅಕ್ಕ ಪದ್ಮಾ ಖಚಿತ ಪಡಿಸಿದ್ದು, ಅವನು ಇನ್ನೂ ಬದುಕಿದ್ದಾನೆ ಎಂದು ನಂಬಿದ್ದಿವಿ, ಅವನು ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಈ ಕುರಿತು ಎಸ್ಐಟಿ ಅಧಿಕಾರಿಗಳು ದೂರು ನೀಡಲು ಸೂಚಿಸಿದ್ದು, ಗುಬ್ಬಿ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ನೀಡುತ್ತೇವೆ ಎಂದು ಸಹೋದರಿಯರು ಹೇಳಿದ್ದಾರೆ.