MLA Karemma G: ದೇವದುರ್ಗ ಶಾಸಕಿ ಕರೆಮ್ಮಾ ಜಿ. ನಾಯಕ್ ಕಾರು ಅಪಘಾತ
ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮಾ ಜಿ. ನಾಯಕ್ ಕಾರು ಅಪಘಾತಕ್ಕೀಡಾಗಿದೆ. ಲಿಂಗಸುಗೂರು ತಾಲೂಕಿನ ಗುರುಗುಂಟಾ ಬಳಿ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ಕಾರಿಗೆ ಶಾಸಕಿ ಇದ್ದ ಕಾರು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕರೆಮ್ಮಾ ನಾಯಕ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವದುರ್ಗದಿಂದ ಹುಬ್ಬಳ್ಳಿಗೆ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ. ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶಾಸಕರು ತೆರಳುತ್ತಿದ್ದ ವೇಳೆ ಕಾರಿನ ಮುಂಬದಿ ಇದ್ದ ಮತ್ತೊಂದು ಕಾರಿಗೆ ನಾಯಿ ಅಡ್ಡ ಬಂದಿದೆ. ನಾಯಿ ತಪ್ಪಿಸಲು ಕಾರಿನ ಚಾಲಕ ಯತ್ನಿಸಿದ್ದು, ರಸ್ತೆ ಪಕ್ಕದ ಗುಡ್ಡಕ್ಕೆ ಕಾರು ಡಿಕ್ಕಿಯಾಗಿದೆ. ಹಿಂದೆಯೇ ಶಾಸಕರಿದ್ದ ಕಾರು ಕೂಡ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆದಿದೆ.
ಘಟನೆಯಲ್ಲಿ ಜಖಂಗೊಂಡಿರುವ ಎರಡು ಕಾರುಗಳು ಕೂಡ ಕರೆಮ್ಮಾ ನಾಯಕ್ ಅವರಿಗೆ ಸೇರಿದ್ದು ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಆದರೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಶಾಸಕಿ ಕರೆಮ್ಮಾ ನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.