Delhi bangladeshi nationals: ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 25 ಬಾಂಗ್ಲಾದೇಶ ಪ್ರಜೆಗಳ ಬಂಧನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 25 ಬಾಂಗ್ಲಾದೇಶದ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಗುಪ್ತಚರ ಮಾಹಿತಿಯ ಮೇರೆಗೆ ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 13 ಮಹಿಳೆಯರು ಮತ್ತು 12 ಪುರುಷರು ಸೇರಿದ್ದಾರೆ ಎಂದು ಹೆಚ್ಚುವರಿ ಡಿಸಿಪಿ ಐಶ್ವರ್ಯ ಶರ್ಮಾ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಅವರು, ಇವರಲ್ಲಿ ಯಾರಿಗೂ ವಾಸವಿರಲು ಯಾವುದೇ ಕಾನೂನುಬದ್ದ ದಾಖಲೆಗಳಿಲ್ಲ. ಈ ಹಿನ್ನೆಲೆಯಲ್ಲಿ ಬಂಧಿತರ ಹಿನ್ನೆಲೆ ಪರಿಶೀಲನೆ ಮಾಡಲಾಗುತ್ತಿದೆ ಮತ್ತು ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಬಂಧಿತರು ಐಎಂಓ ಮೊಬೈಲ್ ಅಪ್ಲಿಕೇಶನ್ ಮೂಲಕ ಬಾಂಗ್ಲಾದೇಶದಲ್ಲಿನ ಜನರೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿ ಲಭಿಸಿದೆ. ಈ ಅಪ್ಲಿಕೇಶನ್ ಅಂತಾರಾಷ್ಟ್ರೀಯ ಕರೆಗಳಿಗೆ ಹೆಚ್ಚು ಬಳಸಲಾಗುತ್ತದೆ’ ಎಂದಿದ್ದಾರೆ.
ಇದಕ್ಕೂ ಮುನ್ನ ಕೆಲವು ದಿನಗಳ ಹಿಂದೆ ಮಹಿಪಾಲ್ಪುರದಲ್ಲಿ ಇಬ್ಬರು ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದರು. ಜನವರಿ ತಿಂಗಳಿನಿಂದ ಮೇ ವರೆಗೆ ದೆಹಲಿಯಲ್ಲಿ ಸುಮಾರು 900 ಬಾಂಗ್ಲಾದೇಶದ ಪ್ರಜೆಗಳನ್ನು ಅಕ್ರಮ ವಾಸದ ಹಿನ್ನೆಲೆಯಲ್ಲಿ ಪತ್ತೆಹಚ್ಚಲಾಗಿದೆ ಪೊಲೀಸರು ತಿಳಿಸಿದ್ದಾರೆ.